ಡಿಸಿ ಪಿಎ ಚಾಟ್ ಪ್ರಕರಣದಲ್ಲಿ ಸತ್ಯಾ ಹೊರಬರಲಿ – ಎಚ್.ಡಿ. ಕುಮಾರಸ್ವಾಮಿ
ಲಿಂಕ್ ನಕಲಿಸಲಾಗಿದೆ ✓
ಹಾಸನ: ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಅವರ ಚಾಟ್ ಪ್ರಕರಣದ ಸತ್ಯಾಸತ್ಯತೆ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದೇನೆ. ಆದರೆ, ಯಾರಾದರೂ ಹಣ ಪಡೆದಿದ್ದಾರೆ ಎಂದು ನಾನು ಆರೋಪಿಸಿಲ್ಲ ಅಥವಾ ಯಾರ ಮೇಲೂ ಬೆಟ್ಟು ಮಾಡಿ ತೋರಿಸಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿ ಮಾತನಾಡಿದ ಅವರು, ಚಾಟ್ನಲ್ಲಿ ಉಲ್ಲೇಖವಾಗಿರುವ ವಿಚಾರಗಳ ಸತ್ಯಾಸತ್ಯತೆಯನ್ನು ತನಿಖೆ ನಡೆಸಿ ಎಂದು ಹೇಳುವುದು ತಪ್ಪೇ? ನನ್ನ ಮುಂದೆ ಇಂತಹ ವಿಷಯಗಳು ಬಂದಾಗ ತನಿಖೆಗೆ ಒತ್ತಾಯಿಸುವುದು ಸಹಜ. ಈ ಪ್ರಕರಣದಲ್ಲಿ ಯಾರ ಹೆಸರುಗಳನ್ನೂ ನಾನು ಪ್ರಸ್ತಾಪಿಸಿಲ್ಲ. ಚಾಟ್ನಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಹೆಸರುಗಳಿವೆ. ಅವರು ತಪ್ಪು ಮಾಡಿಲ್ಲದಿದ್ದರೆ ತನಿಖೆಗೆ ಏಕೆ ಭಯಪಡಬೇಕು ಎಂದು ಪ್ರಶ್ನಿಸಿದರು. ಅಧಿಕಾರಿಗಳು ಯಾವ ರೀತಿ ನಡೆದುಕೊಳ್ಳಬೇಕು, ಅದಕ್ಕೆ ಸಂಬಂಧಿಸಿದ ನಿಯಮಗಳೇನು ಎಂಬುದನ್ನು ಸರ್ಕಾರ ಗಮನಿಸಬೇಕು. ಆದರೆ, ಈ ಸರ್ಕಾರ ಅಧಿಕಾರಿಗಳ ನಡವಳಿಕೆಯಲ್ಲಿ ನಿಯಮಗಳ ಎಲ್ಲೆ ಮೀರುವುದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಯ ಪಕ್ಕದಲ್ಲಿ ಕುಳಿತುಕೊಂಡು ಏನು ನಡೆದಿದೆ ಎಂಬುದನ್ನು ಗಮನಿಸಿ ಕ್ಲೀನ್ಚಿಟ್ ನೀಡಿರುವುದನ್ನು ನೋಡಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ತನಿಖೆ ಯಾವ ರೀತಿ ನಡೆಯಬಹುದು ಎಂದು ಪ್ರಶ್ನಿಸಿದರು.
ಈ ಪ್ರಕರಣದ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ. ಸರ್ಕಾರದಲ್ಲಿ ಈಗ ಏನೂ ಆಗುವುದಿಲ್ಲ. ಅದಕ್ಕೆ ಕಾಲ ಬರಬೇಕು. ಕಾಲ ಬಂದಾಗ ಯಾವ ರೀತಿಯ ಬದಲಾವಣೆಗಳಾಗುತ್ತವೆ ಎಂಬುದನ್ನು ಕಾದು ನೋಡೋಣ ಎಂದರು.
ಇಂದು ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಕುಳಿತು ಹೇಳುತ್ತಿದ್ದೇನೆ. ಅಧಿಕಾರ ದುರುಪಯೋಗ ಹಾಗೂ ತಪ್ಪು ನಡವಳಿಕೆ ತೋರಿದವರಿಗೆ ತಕ್ಕ ಫಲ ದೊರೆಯಬೇಕು. ಅದನ್ನು ದೇವರೇ ನೀಡುತ್ತಾನೆ. ಈ ತನಿಖೆಯಿಂದ ಯಾವುದೇ ಫಲಿತಾಂಶ ಹೊರಬರುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಈಗಾಗಲೇ ಮುಖ್ಯಮಂತ್ರಿಗಳೇ ಕ್ಲೀನ್ಚಿಟ್ ನೀಡಿದ ಮೇಲೆ ತನಿಖೆ ಹೇಗೆ ನಡೆಯಲಿದೆ ಎಂಬುದನ್ನು ಜನರೇ ಅರ್ಥಮಾಡಿಕೊಳ್ಳಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ