ಇಡಿಯಿಂದ 580 ಪುಟಗಳ ಚಾರ್ಜ್ಶೀಟ್, ಕೆಪಿಎಸ್ಸಿ ಹಗರಣದಲ್ಲಿ 4 ಜನರ ಪಟ್ಟಿ ಬಿಡುಗಡೆ
ಲಿಂಕ್ ನಕಲಿಸಲಾಗಿದೆ ✓
ಇಡಿಯಿಂದ 580 ಪುಟಗಳ ಚಾರ್ಜ್ಶೀಟ್, ಕೆಪಿಎಸ್ಸಿ ಹಗರಣದಲ್ಲಿ 4 ಜನರ ಪಟ್ಟಿ ಬಿಡುಗಡೆ
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯವು (ED) ತನಿಖೆಯನ್ನು ತೀವ್ರಗೊಳಿಸಿದೆ. ಇದರ ಭಾಗವಾಗಿ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಸೇರಿದಂತೆ ಒಟ್ಟು ನಾಲ್ವರು ಪ್ರಮುಖ ಆರೋಪಿಗಳ ವಿರುದ್ಧ ಇ.ಡಿ ವಿಶೇಷ ನ್ಯಾಯಾಲಯಕ್ಕೆ 580ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.
ಈ ಪ್ರಕರಣದಲ್ಲಿ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ , ಕೆಪಿಎಸ್ಸಿ ಸದಸ್ಯೆ ಬಿ.ವಿ.ಗೀತಾ ಹಾಗೂ ಮಧ್ಯವರ್ತಿ ಬಸವರಾಜ ಕನ್ನಾಳೆ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ದೋಷಾರೋಪ ಪಟ್ಟಿಯಲ್ಲಿನ ಪ್ರಮುಖಾಂಶಗಳ ವಿವರ:
* ಈ ಚಾರ್ಜ್ಶೀಟ್ನಲ್ಲಿ 50ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳು ಹಾಗೂ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.
* ಮಧ್ಯವರ್ತಿ ಬಸವರಾಜ ಕನ್ನಾಳೆ ಹಾಗೂ ಆತನ ಸಹಚರರು ಪರೀಕ್ಷೆ ಹಿಂದಿನ ದಿನವೇ ಅಭ್ಯರ್ಥಿಗಳಿಗೆ ಉತ್ತರ ಸಹಿತ ಪ್ರಶ್ನೆಪತ್ರಿಕೆ ನೀಡಿ, ಉತ್ತರಗಳನ್ನು ಕಂಠಪಾಠ ಮಾಡಿಸಿದ್ದರು. ದೇವನಹಳ್ಳಿ ಸಮೀಪದ ರಿಸಾರ್ಟ್ನ ಸಿಬ್ಬಂದಿ ಈ ಕುರಿತು ಹೇಳಿಕೆ ನೀಡಿದ್ದಾರೆ.
* ಅಭ್ಯರ್ಥಿಗಳಿಂದ ಲಂಚದ ಹಣದ ವರ್ಗಾವಣೆ ಮಾಡಿಸಿಕೊಂಡಿದ್ದ ಬೀದರ್ನ ಸಹಕಾರಿ ಬ್ಯಾಂಕಿನ ಸಿಬ್ಬಂದಿ ಹೇಳಿಕೆಗಳು ಹಾಗೂ ಆರೋಪಿಗಳಿಗೆ ಲಂಚದ ಹಣ ನೀಡಿದ್ದ ಅಭ್ಯರ್ಥಿಗಳು ಮತ್ತು ಅವರ ಪೋಷಕರ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.
* ಲಂಚದ ಹಣವನ್ನು ಬಳಸಿ ಆರೋಪಿ ಜ್ಞಾನೇಂದ್ರ ಕುಮಾರ್ , ಅವರು ತಮ್ಮ ಸ್ನೇಹಿತೆಗಾಗಿ ಸುಮಾರು 52 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಸಿಬ್ಬಂದಿ ಹಾಗೂ ಆಭರಣ ಮಳಿಗೆಯ ಸಿಬ್ಬಂದಿ ಹೇಳಿಕೆಗಳನ್ನು ಸೇರಿಸಲಾಗಿದೆ.
* ತಮ್ಮ ಸ್ನೇಹಿತೆಯೊಂದಿಗೆ ಚಿನ್ನಾಭರಣ ಅಂಗಡಿಗೆ ತೆರಳಿದ್ದ ಸಿಸಿಟಿವಿ ದಶ್ಯಾವಳಿಗಳು ಮತ್ತು ಫೋಟೋಗಳನ್ನು ಲಭ್ಯಪಡಿಸಲಾಗಿದೆ.
* ನಾಲ್ವರು ಆರೋಪಿಗಳ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗಳ ವಿವರಗಳನ್ನು ದೋಷಾರೋಪ ಪಟ್ಟಿಯಲ್ಲಿ ಅಧಿಕೃತವಾಗಿ ಅಡಕಗೊಳಿಸಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ