ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
KPSC ನೇಮಕಾತಿ ಹಗರಣ: ಸರ್ಕಾರಿ ಉದ್ಯೋಗದ ಕನಸಿಗೂ ಬೆಲೆ ನಿಗದಿ! ಆಯೋಗದ ಸದಸ್ಯೆಯೇ ಎಸ್‌ಐಟಿ ಬಲೆಗೆಜಾತಿ ಮತ್ತು ಮರ್ಯಾದೆಯ ಸಂಕೋಲೆಯಲ್ಲಿ ಯುವಜನರ ಸ್ವಾತಂತ್ರ್ಯಬಂಗಾಳ ಕೊಲ್ಲಿಯಲ್ಲಿ ಅಕ್ವಾನ್ ಚಂಡಮಾರುತ: ಆಂಧ್ರ ಕರಾವಳಿಗೆ ಅಪ್ಪಳಿಸಲು ಸಿದ್ಧತೆ; ಕರ್ನಾಟಕದಲ್ಲೂ ಮಳೆಯ ಮುನ್ಸೂಚನೆಅವರಿವರ ಕಣ್ಣಲ್ಲಿ ಅವಳ ‘ಪ್ರೇಮ’!ಸಿಜೆಐ ಸೂರ್ಯ ಕಾಂತ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ರಾಜ್ಯದಾದ್ಯಂತ ಲೋಕಾಯುಕ್ತರ ದಿಢೀರ್ ಕಾರ್ಯಾಚರಣೆ: ಅರಣ್ಯಾಧಿಕಾರಿ, ವೈದ್ಯರು ಸೇರಿದಂತೆ ಹಲವು ಸರ್ಕಾರಿ ನೌಕರರ ಮನೆಗಳ ಮೇಲೆ ದಾಳಿಕಾಳುಮೆಣಸಿಗೆ ಬಂಗಾರದ ಬೆಲೆ! ಕೆ.ಜಿ.ಗೆ ₹773 ದಾಟಿದ ದರ; ₹800ರ ಗಡಿಯತ್ತ ಕಪ್ಪು ಚಿನ್ನದ ಓಟ!ಅಮರನಾಥ ಯಾತ್ರೆಯ ಹಾದಿಯಲ್ಲಿ ಭೂಕುಸಿತದ ಭೀತಿ; ಶೇ.84ರಷ್ಟು ಇಳಿಜಾರುಗಳು ಅಪಾಯದ ವಲಯದಲ್ಲಿ! ; ಅಧ್ಯಯನ ವರದಿಯಲ್ಲಿ ಆತಂಕಕಾರಿ ಅಂಶ ಬಹಿರಂಗಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಮುಂದಾಗಲಿ: ಸಿಎಂಗೆ ಪ್ರಹ್ಲಾದ್ ಜೋಶಿ ಪತ್ರಬಿಹಾರ | ಕಾನೂನು ಸಚಿವರ ಮನೆಯಲ್ಲೇ ಕೈಚಳಕ ತೋರಿಸಿದ ಕಳ್ಳರು: 90 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಸೂರೆಎಐ, ಡೀಪ್‌ಟೆಕ್ ಕ್ಷೇತ್ರದಲ್ಲಿ ಕರ್ನಾಟಕದ ಹೊಸ ಹೆಜ್ಜೆ: ಆರು ಮಹತ್ವದ ತಂತ್ರಜ್ಞಾನ ಆದ್ಯತೆಯ ಘೋಷಣೆ, 63,200 ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಎಐ ತರಬೇತಿಯ ಗುರಿರಾಹುಲ್ ಗಾಂಧಿ ಹೇಳಿಕೆಗೆ ಟ್ರೋಲ್‌ಗಳ ವ್ಯಂಗ್ಯ; ಹೊಯ್ಸಳೇಶ್ವರ ದೇವಾಲಯದ ಶಿಲ್ಪದ ಮೂಲಕ ತಿರುಗೇಟು!ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು:‌ ಹೆದರಿ ಗುಜರಾತ್‌ ತೊರೆದ ಬಿಲ್ಕಿಸ್‌ ಬಾನೊ ಕುಟುಂಬಕೇರಳಂ ನಲ್ಲಿ ಹಕ್ಕಿಜ್ವರ ಭೀತಿ: 26 ಸಾವಿರ ಕೋಳಿಗಳು, ಬಾತುಕೋಳಿಗಳ ಹತ್ಯೆಗೆ ಸಿದ್ಧತೆ! 10 ಕಿ.ಮೀ. ವ್ಯಾಪ್ತಿಯಲ್ಲಿ ಕಣ್ಗಾವಲುಧರ್ಮದ ಆಧಾರದಲ್ಲಿ ಮತದಾರರ ವಿಶ್ಲೇಷಣೆ ಅಸಾಧ್ಯ: ಯೋಗಿ ಆದಿತ್ಯನಾಥ್‌ ಹೇಳಿಕೆಗೆ ಉತ್ತರಿಸಿದ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿನನ್ನ ವಾದವನ್ನೇ ಆಲಿಸದೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ, ಜಾಮೀನು ನಿರ್ಧಾರದ ವಿರುದ್ಧ ಹೋರಾಡುತ್ತೇನೆ: ಬಿಲ್ಕಿಸ್‌ ಬಾನೊಇನ್ಶೂರೆನ್ಸ್ ಇಲ್ಲದೆ ಟೋಲ್‌ ದಾಟುವ ವಾಹನಗಳಿಗೆ ಎಸ್‌ಎಮ್‌ಎಸ್‌ ಅಲರ್ಟ್:‌ ಪ್ರಾಯೋಗಿಕ ಯೋಜನೆ ಆರಂಭಿಸಿದ ಎನ್‌ಎಚ್‌ಎಐಎಸ್‌ಐಆರ್‌ ಕುರಿತು ಏಕಮತದ ತೀರ್ಮಾನ ಕೈಗೊಂಡಿರುವುದಕ್ಕೆ ಇಸಿಐ ದಾಖಲೆಗಳನ್ನು ಸಲ್ಲಿಸಿಲ್ಲ: ಸುಪ್ರೀಂಕೋರ್ಟಿನಲ್ಲಿ ವಾದ ಸಲ್ಲಿಸಿದ ಅರ್ಜಿದಾರರುಬೇಡಿಕೆ ಈಡೇರಿಸುವ ತನಕ ನಾವು ಇಲ್ಲಿಂದ ಹೋಗುವುದಿಲ್ಲ: ಆರೋಗ್ಯ ಸಚಿವರ ಮನವಿಯನ್ನು ತಿರಸ್ಕರಿಸಿದ ಆಶಾ ಕಾರ್ಯಕರ್ತೆಯರುದಕ್ಷಿಣ ಕನ್ನಡ | ಕೋಲ್ಡ್‌ ಪ್ರೆಸ್ಡ್‌ ಹೆಸರಿನಲ್ಲಿ ಕಚ್ಚಾ ಎಣ್ಣೆ ಮಾರಾಟ: 1,240 ಕೆ.ಜಿ. ಅಡುಗೆ ಎಣ್ಣೆ ವಶಕ್ಕೆ ಪಡೆದ ಆಹಾರ ಸುರಕ್ಷತಾ ಇಲಾಖೆ

ಜಾತಿ ಮತ್ತು ಮರ್ಯಾದೆಯ ಸಂಕೋಲೆಯಲ್ಲಿ ಯುವಜನರ ಸ್ವಾತಂತ್ರ್ಯ

PPeepal Media Desk

Peepal Media Desk ಅಂಕಣ

• 5 ನಿಮಿಷದ ಓದು

ಜಾತಿ ಮತ್ತು ಮರ್ಯಾದೆಯ ಸಂಕೋಲೆಯಲ್ಲಿ ಯುವಜನರ ಸ್ವಾತಂತ್ರ್ಯ

“..ಮಕ್ಕಳಿಗೆ ಜನ್ಮ ನೀಡುವುದು ಪೋಷಕರ ಆಯ್ಕೆಯಾಗಿರಬಹುದು. ಆದರೆ ಆ ಮಕ್ಕಳ ಬದುಕು ಅವರದ್ದೇ. ಅವರ ಕನಸು, ಪ್ರೀತಿ, ಆಯ್ಕೆ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವುದೇ ನಿಜವಾದ ಪೋಷಕತ್ವ..” ಲೇಖಕಿ ರುಕ್ಮಿಣಿ ನಾಗಣ್ಣವರ ಅವರ ಬರಹದಲ್ಲಿ

ಮಕ್ಕಳ ಬದುಕು ಅರಳಬೇಕಾದ ಮನೆಯೇ ಅವರ ಕನಸುಗಳಿಗೆ ಗೋಡೆಯಾದರೆ ಅದಕ್ಕಿಂತ ದೊಡ್ಡ ದುರಂತ ಇನ್ನೇನಿದೆ? ಪ್ರೀತಿಸುವುದು, ತನ್ನ ಇಷ್ಟದ ವ್ಯಕ್ತಿಯೊಂದಿಗೆ ಬದುಕು ಕಟ್ಟಿಕೊಳ್ಳುವುದು ಇಷ್ಟೊಂದು ದೊಡ್ಡ ಅಪರಾಧವೇ? ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಲು ಬಯಸಿದ ಸಾನಿಯಾ ಪಟೇಲ್ ತನ್ನ ತಂದೆಯಿಂದಲೇ ಹತ್ಯೆಗೀಡಾಗಿದ್ದಾಳೆ ಎಂಬ ವರದಿ ನಮ್ಮ ಸಮಾಜದ ಕ್ರೌರ್ಯವನ್ನು ಮತ್ತೊಮ್ಮೆ ಬಯಲು ಮಾಡಿದೆ. ಆಕೆಯ ಸಾವಿನೊಂದಿಗೆ ಕೊನೆಯಾಗಿದ್ದು ಒಂದು ಜೀವ ಮಾತ್ರವಲ್ಲ. ತನ್ನ ಬದುಕಿನ ಬಗ್ಗೆ ತಾನೇ ನಿರ್ಧಾರ ತೆಗೆದುಕೊಳ್ಳುವ ಒಬ್ಬ ಯುವತಿಯ ಸ್ವಾತಂತ್ರ್ಯವೂ ಹೌದು. ಪ್ರೀತಿಯ ಆಯ್ಕೆಗೆ ಸಾವಿನ ಶಿಕ್ಷೆ ನೀಡುವಷ್ಟು ಕ್ರೂರವಾಗಿದೆಯೇ ನಮ್ಮ ಸಮಾಜದ ಜಾತಿ ಮತ್ತು ಮರ್ಯಾದೆಯ ಕಲ್ಪನೆ?

ಗುಜರಾತ್‌ನ ಆನಂದ್ ಜಿಲ್ಲೆಯ 21 ವರ್ಷದ ಬಿ.ಕಾಂ ಪದವೀಧರೆ ಸಾನಿಯಾ ಪಟೇಲ್ ತನ್ನದೇ ಗ್ರಾಮದ ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಲು ಬಯಸಿದ್ದಳು. ಯುವಕ ಬೇರೆ ಜಾತಿಯವನು ಮತ್ತು ಆತನ ಆದಾಯ ಕಡಿಮೆ ಎಂಬ ಕಾರಣಕ್ಕೆ ಆಕೆಯ ತಂದೆ ಈ ಸಂಬಂಧವನ್ನು ವಿರೋಧಿಸಿದ್ದರು. ಕಡೆಗೆ ಮಗಳ ಪ್ರೀತಿಯನ್ನು ಒಪ್ಪಿಕೊಳ್ಳದ ತಂದೆ, ನವೆಂಬರ್ 9ರಂದು ಮುಂಜಾನೆ ಮನೆಯಲ್ಲೇ ಆಕೆಯ ಕತ್ತು ಹಿಸುಕಿ ಕೊಂದಿದ್ದಲ್ಲದೆ, ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಸತ್ಯ ಬಯಲಾಗಿದೆ.

ಜಡಗೊಂಡ ಸಮಾಜದ ಕ್ರೂರ ಮುಖ
ಸಾನಿಯಾಳ ಈ ದುರಂತ ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ. ಇಂತಹ ಎಷ್ಟೋ ಪ್ರಕರಣಗಳು ನಮ್ಮ ನಡುವೆ ಸದ್ದಿಲ್ಲದೆ ನಡೆಯುತ್ತಲೇ ಇವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶಗಳೂ ಈ ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತವೆ. NCRBಯ 2024ರ ವರದಿಯ ಪ್ರಕಾರ, ದೇಶದಲ್ಲಿ ಆ ವರ್ಷ ಮರ್ಯಾದೆ ಹತ್ಯೆಯ ಉದ್ದೇಶದಡಿ 36 ಕೊಲೆ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಇಂತಹ 38 ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಅಂಕಿ-ಅಂಶಗಳನ್ನು ದೇಶದಲ್ಲಿ ನಡೆದ ಎಲ್ಲ ಮರ್ಯಾದೆ ಹತ್ಯೆಗಳ ನಿಖರ ಸಂಖ್ಯೆಯೆಂದು ಪರಿಗಣಿಸಲಾಗುವುದಿಲ್ಲ. ಇಂತಹ ಅನೇಕ ಘಟನೆಗಳು ಸಾಮಾನ್ಯ ಕೊಲೆ ಅಥವಾ ಇತರ ಅಪರಾಧಗಳ ಅಡಿಯಲ್ಲಿ ದಾಖಲಾಗುವ ಸಾಧ್ಯತೆಯಿದೆ. ಹೀಗಾಗಿ ಅಧಿಕೃತ ದಾಖಲೆಗಳಲ್ಲಿ ಕಾಣಿಸುವ ಸಂಖ್ಯೆಗಿಂತ ವಾಸ್ತವದಲ್ಲಿ ಇಂತಹ ಘಟನೆಗಳ ಪ್ರಮಾಣ ಹೆಚ್ಚಿರಬಹುದು.

ಈ ಅಂಕಿ-ಅಂಶಗಳು ಕೇವಲ ಅಪರಾಧಗಳ ಸಂಖ್ಯೆಯನ್ನು ತೋರಿಸುವುದಿಲ್ಲ. ಅವುಗಳ ಹಿಂದಿರುವ ಸಾಮಾಜಿಕ ಮನಸ್ಥಿತಿಯನ್ನೂ ಅರ್ಥಮಾಡಿಕೊಳ್ಳಬೇಕಿದೆ. ಇದು ಕೇವಲ ಒಂದು ಕುಟುಂಬದ ದುರಂತವಲ್ಲ. ನಮ್ಮ ಸಮಾಜದಲ್ಲಿ ಇನ್ನೂ ಬಲವಾಗಿ ಬೇರೂರಿರುವ ಜಾತಿ ವ್ಯವಸ್ಥೆ, ಪಿತೃಪ್ರಧಾನ ಮನಸ್ಥಿತಿ ಮತ್ತು ಕುಟುಂಬದ ಮರ್ಯಾದೆಯ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆಯ ಪ್ರತಿಬಿಂಬ. ಒಬ್ಬ ಯುವತಿ ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು ಎನ್ನುವುದನ್ನೂ ಕುಟುಂಬವೇ ನಿರ್ಧರಿಸಬೇಕು ಎಂಬ ಮನಸ್ಥಿತಿ ಇಂದಿಗೂ ಜೀವಂತವಾಗಿದೆ. ಅದರಲ್ಲೂ ಜಾತಿಯ ಗಡಿ ದಾಟಿ ಪ್ರೀತಿಸಿದಾಗ ಕುಟುಂಬದ ಗೌರವಕ್ಕೆ ಧಕ್ಕೆ ಬಂತು ಎಂದು ಭಾವಿಸುವವರು, ತಮ್ಮ ಕುಟುಂಬದ ಮರ್ಯಾದೆಗಾಗಿ ಯುವಜನರ ಬದುಕನ್ನೇ ಬಲಿಕೊಡಲು ಸಿದ್ಧರಾಗುತ್ತಾರೆ.

ಆದರೆ ಯುವಜನರು ಕೇವಲ ನಾಳಿನ ಪ್ರಜೆಗಳಲ್ಲ. ಅವರಿಗೂ ಇಂದೇ ತಮ್ಮದೇ ಆದ ಬದುಕಿದೆ. ತಮ್ಮ ಶಿಕ್ಷಣ, ಕೆಲಸ, ಸ್ನೇಹ, ಪ್ರೀತಿ, ಮದುವೆ ಮತ್ತು ಜೀವನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಹಕ್ಕಿದೆ. ಪ್ರಾಪ್ತವಯಸ್ಕರು ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ. ಪೋಷಕರು ತಮ್ಮ ಅನುಭವದಿಂದ ಸಲಹೆ ನೀಡಬಹುದು. ಮಕ್ಕಳ ನಿರ್ಧಾರಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಬಹುದು. ಆದರೆ ಅವರ ಪರವಾಗಿ ಬದುಕಿನ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಭಿನ್ನಾಭಿಪ್ರಾಯವಿದ್ದರೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಬೆದರಿಕೆ, ಹಿಂಸೆ ಅಥವಾ ಬಲವಂತಕ್ಕೆ ಯಾವ ಕಾರಣವೂ ಸಮರ್ಥನೆಯಾಗಲಾರದು.

ಪೋಷಕತ್ವ ಎಂದರೆ ಒಡೆತನವಲ್ಲ
ಯುವಜನರ ಬದುಕಿನ ಆಯ್ಕೆಯ ಮೇಲೆ ಕುಟುಂಬದವರು ಇಷ್ಟೊಂದು ನಿಯಂತ್ರಣ ಸಾಧಿಸಲು ಪ್ರಯತ್ನಿಸುವುದರ ಹಿಂದೆ ಪೋಷಕರ ಒಡೆತನದ ಮನಸ್ಥಿತಿಯೂ ಇದೆ. ಅದಕ್ಕೆ ನೀರೆರೆದು ಪೋಷಿಸುತ್ತಿರುವುದು ನಮ್ಮ ಸಮಾಜದ ಜಾತಿ ವ್ಯವಸ್ಥೆ ಮತ್ತು ಪಿತೃಪ್ರಧಾನ ಧೋರಣೆ. ಆದರೆ ಅದಕ್ಕೂ ಮುನ್ನ, ಪೋಷಕತ್ವದ ಮೂಲಸತ್ವ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಖಲೀಲ್ ಗಿಬ್ರಾನ್ ತಮ್ಮ The Prophet ಕೃತಿಯ ‘On Children’ ಕವಿತೆಯಲ್ಲಿ ಮಕ್ಕಳ ಕುರಿತು ಒಂದು ಸುಂದರವಾದ ಚಿಂತನೆಯನ್ನು ಹಂಚಿಕೊಳ್ಳುತ್ತಾರೆ. ಅದರ ಭಾವಾರ್ಥ ಹೀಗಿದೆ:

“ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ.
ಅವರು ಬದುಕಿನ ತನ್ನದೇ ಹಂಬಲದ ಮಕ್ಕಳು.
ಅವರು ನಿಮ್ಮ ಮೂಲಕ ಬಂದವರೇ ಹೊರತು ನಿಮ್ಮಿಂದ ಹುಟ್ಟಿದವರಲ್ಲ.
ಅವರು ನಿಮ್ಮೊಂದಿಗೆ ಇದ್ದರೂ ನಿಮಗೆ ಸೇರಿದವರಲ್ಲ.”

— ಖಲೀಲ್ ಗಿಬ್ರಾನ್, ‘On Children’ (ಭಾವಾನುವಾದ)

ಗಿಬ್ರಾನ್ ಅವರ ಈ ಮಾತುಗಳು ಪೋಷಕತ್ವದ ನಿಜವಾದ ಅರ್ಥವನ್ನು ತಿಳಿಸುತ್ತವೆ. ಮಕ್ಕಳು ಪೋಷಕರ ಮೂಲಕ ಈ ಜಗತ್ತಿಗೆ ಬಂದಿರಬಹುದು. ಆದರೆ ಅವರ ಬದುಕು ಅವರದ್ದೇ. ಅವರ ಕನಸು, ಪ್ರೀತಿ, ಆಯ್ಕೆ ಮತ್ತು ಸ್ವಾತಂತ್ರ್ಯವೂ ಅವರದ್ದೇ. ಪೋಷಕರು ಮಕ್ಕಳಿಗೆ ಜನ್ಮ ನೀಡಿದವರು. ಅವರನ್ನು ಬೆಳೆಸುವುದು ಪೋಷಕರ ಜವಾಬ್ದಾರಿ. ಆದರೆ ಅದರಿಂದ ಮಕ್ಕಳ ಮೇಲೆ ಒಡೆತನ ಸಿಗುವುದಿಲ್ಲ. ಮಕ್ಕಳಿಗೆ ಜನ್ಮ ನೀಡಿದ್ದೇವೆ ಎನ್ನುವುದು ಅವರನ್ನು ಹೊಡೆಯುವ, ಬೆದರಿಸುವ, ಬಲವಂತವಾಗಿ ಮದುವೆ ಮಾಡುವ ಅಥವಾ ಕೊಲ್ಲುವ ಅಧಿಕಾರ ಕೊಡುವುದಿಲ್ಲ. ಪೋಷಕತ್ವ ಎನ್ನುವುದು ಜವಾಬ್ದಾರಿಯೇ ಹೊರತು ಒಡೆತನವಲ್ಲ.

ಜಾತಿ ಮತ್ತು ಪಿತೃಪ್ರಧಾನತೆಯ ಸಂಕೋಲೆ
ಪೋಷಕತ್ವದ ಈ ಮೂಲಭೂತ ಅರ್ಥವನ್ನು ಮರೆಮಾಚುವಲ್ಲಿ ಜಾತಿ ವ್ಯವಸ್ಥೆ ಮತ್ತು ಪಿತೃಪ್ರಧಾನ ಮನಸ್ಥಿತಿಯ ಪಾತ್ರವೂ ದೊಡ್ಡದಿದೆ. ಇಲ್ಲಿ ಜಾತಿಯ ಪ್ರಶ್ನೆಯನ್ನೂ ಅಷ್ಟೇ ಗಂಭೀರವಾಗಿ ನೋಡಬೇಕಿದೆ. ಬೇರೆ ಜಾತಿಯವರನ್ನು ಪ್ರೀತಿಸುವುದು ಅಥವಾ ಮದುವೆಯಾಗುವುದು ಇಂದಿಗೂ ಅನೇಕ ಕುಟುಂಬಗಳಿಗೆ ಸಹಿಸಲಾಗದ ಸಂಗತಿಯಾಗಿದೆ. ಜಾತಿಯ ಗಡಿಗಳನ್ನು ಉಳಿಸಿಕೊಳ್ಳುವುದರ ಹಿಂದೆ ಕೇವಲ ಸಂಪ್ರದಾಯದ ಪ್ರಶ್ನೆಯಿಲ್ಲ. ಆಸ್ತಿ, ಹಣ, ಕುಟುಂಬದ ಸ್ಥಾನಮಾನ ಮತ್ತು ಸಾಮಾಜಿಕ ಅಧಿಕಾರವನ್ನು ತಮ್ಮದೇ ಗುಂಪಿನೊಳಗೆ ಉಳಿಸಿಕೊಳ್ಳುವ ಲೆಕ್ಕಾಚಾರವೂ ಇದೆ. ಹೀಗಾಗಿ ಪ್ರೀತಿಯ ಆಯ್ಕೆಯನ್ನು ವಿರೋಧಿಸುವುದು ಕೆಲವೊಮ್ಮೆ ಜಾತಿ ವ್ಯವಸ್ಥೆಯನ್ನು ಮುಂದುವರಿಸುವ ಪ್ರಯತ್ನವಾಗಿರುತ್ತದೆ.

ಈ ನಿಯಂತ್ರಣದ ಹೊರೆ ಮಹಿಳೆಯರ ಮೇಲೆ ಇನ್ನೂ ಹೆಚ್ಚಾಗಿದೆ. ಅವರು ಯಾರೊಂದಿಗೆ ಮಾತನಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ, ಯಾರನ್ನು ಪ್ರೀತಿಸುತ್ತಾರೆ, ಯಾವಾಗ ಮದುವೆಯಾಗುತ್ತಾರೆ ಎನ್ನುವುದರ ಮೇಲೆ ಕುಟುಂಬದವರ ನಿಗಾ ಇರುತ್ತದೆ. ಮಹಿಳೆಯ ಆಯ್ಕೆಯನ್ನು ಕುಟುಂಬದ ಮರ್ಯಾದೆಯ ಪ್ರಶ್ನೆಯನ್ನಾಗಿ ಮಾಡಲಾಗುತ್ತದೆ. ಇದು ಮಹಿಳೆಯರನ್ನು ಸ್ವತಂತ್ರ ವ್ಯಕ್ತಿಗಳಾಗಿ ನೋಡುವ ಬದಲು ಕುಟುಂಬದ ಗೌರವವನ್ನು ಹೊರುವವರಂತೆ ಕಾಣುವ ಪಿತೃಪ್ರಧಾನ ಮನಸ್ಥಿತಿಯ ಪರಿಣಾಮವಾಗಿದೆ.

ಇಂತಹ ನಿಯಂತ್ರಣ ಮತ್ತು ಬೆದರಿಕೆಗಳು ಯುವಜನರಲ್ಲಿ ಭಯ, ಒಂಟಿತನ ಹಾಗೂ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಕೆಲವರು ತಮ್ಮ ಆಯ್ಕೆಯನ್ನು ಬಿಟ್ಟುಕೊಡುತ್ತಾರೆ. ಇನ್ನೂ ಕೆಲವರು ಮನೆ ಬಿಟ್ಟು ಹೋಗಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ದೂಷಣೆ ಅಥವಾ ಉಪದೇಶಕ್ಕಿಂತ ಸುರಕ್ಷತೆ, ಮಾನಸಿಕ ಬೆಂಬಲ ಮತ್ತು ಕಾನೂನು ನೆರವು ಬೇಕಾಗುತ್ತದೆ.

ಕಾನೂನು ಮತ್ತು ಸಂವಿಧಾನ ನೀಡಿದ ಭರವಸೆ
ಸಾಮಾಜಿಕವಾಗಿ ಇಂತಹ ನಿಯಂತ್ರಣ ಮತ್ತು ದಬ್ಬಾಳಿಕೆಗಳನ್ನು ಎದುರಿಸುವ ಯುವಜನರ ರಕ್ಷಣೆಗೆ ನಮ್ಮ ದೇಶದ ಕಾನೂನು ಮತ್ತು ಸಂವಿಧಾನ ಬಲವಾದ ಭರವಸೆಯನ್ನು ನೀಡಿವೆ. ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ನೀಡಿದೆ. ಸಂವಿಧಾನದ 14ನೇ ವಿಧಿ ಸಮಾನತೆಯನ್ನು ಖಾತರಿಪಡಿಸುತ್ತದೆ. 15ನೇ ವಿಧಿ ಧರ್ಮ, ಜಾತಿ, ಲಿಂಗ ಸೇರಿದಂತೆ ಕೆಲವು ಆಧಾರಗಳ ಮೇಲೆ ರಾಜ್ಯದಿಂದ ನಡೆಯುವ ತಾರತಮ್ಯವನ್ನು ನಿಷೇಧಿಸುತ್ತದೆ. 21ನೇ ವಿಧಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ನೀಡುತ್ತದೆ. ಪ್ರಾಪ್ತವಯಸ್ಕರು ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವುದು ಈ ವೈಯಕ್ತಿಕ ಸ್ವಾತಂತ್ರ್ಯದ ಭಾಗವೆಂದು ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ.

2018ರ ‘ಶಫಿನ್ ಜಹಾನ್ ವಿರುದ್ಧ ಅಶೋಕನ್ ಕೆ.ಎಂ.’ ಪ್ರಕರಣದಲ್ಲಿ ವ್ಯಕ್ತಿಯ ಸಂಗಾತಿಯ ಆಯ್ಕೆ ವೈಯಕ್ತಿಕ ಸ್ವಾತಂತ್ರ್ಯದ ಭಾಗವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಅದೇ ವರ್ಷ ‘ಶಕ್ತಿ ವಾಹಿನಿ ವಿರುದ್ಧ ಭಾರತ ಸರ್ಕಾರ’ ಪ್ರಕರಣದಲ್ಲಿ ಮರ್ಯಾದೆಯ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ತಡೆಯಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಮತ್ತು ಬೆದರಿಕೆ ಎದುರಿಸುವ ಜೋಡಿಗಳಿಗೆ ರಕ್ಷಣೆ ನೀಡಬೇಕು ಎಂದು ನಿರ್ದೇಶಿಸಿದೆ. ಕಾನೂನಿನಲ್ಲಿ ಹಕ್ಕುಗಳಿರುವುದಷ್ಟೇ ಸಾಲದು. ಅವು ಜನರಿಗೆ ತಲುಪುವಂತೆಯೂ ಮಾಡಬೇಕು.

ಕರ್ನಾಟಕದ ‘ಇವ ನಮ್ಮವ’ ಕಾಯ್ದೆಯೂ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮದುವೆಯ ಆಯ್ಕೆಯ ಸ್ವಾತಂತ್ರ್ಯವನ್ನು ರಕ್ಷಿಸುವುದು ಮತ್ತು ಮರ್ಯಾದೆಯ ಹೆಸರಿನಲ್ಲಿ ನಡೆಯುವ ಹಿಂಸೆ, ಬೆದರಿಕೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರವನ್ನು ತಡೆಯುವುದು ಇದರ ಉದ್ದೇಶ. ಕಾಯ್ದೆಗೆ ರಾಜ್ಯಪಾಲರ ಒಪ್ಪಿಗೆ ದೊರೆತು 2026ರ ಏಪ್ರಿಲ್ 10ರಂದು ರಾಜ್ಯಪತ್ರದಲ್ಲಿ ಪ್ರಕಟವಾಗಿದೆ. ಆದರೆ ಕಾಯ್ದೆಯ ಸೆಕ್ಷನ್ 1(2)ರ ಪ್ರಕಾರ, ಅದು ಜಾರಿಗೆ ಬರಲು ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರದಲ್ಲಿ ಪ್ರತ್ಯೇಕ ಅಧಿಸೂಚನೆ ಹೊರಡಿಸಬೇಕಿದೆ.

ಪರಿಹಾರಕ್ಕೇನು ಬೇಕು?
ಕಾನೂನಿನಲ್ಲಿ ಹಕ್ಕುಗಳನ್ನು ಖಾತರಿಪಡಿಸುವುದರ ಜೊತೆಗೆ, ಸಂಕಷ್ಟದಲ್ಲಿರುವ ಯುವಜನರಿಗೆ ಅವು ತಕ್ಷಣವೇ ರಕ್ಷಣೆಯಾಗಿ ದೊರೆಯುವಂತಾಗಬೇಕು. ಕುಟುಂಬದಿಂದ ಬೆದರಿಕೆ ಎದುರಿಸುವ ಯುವಜನರಿಗೆ ಜಿಲ್ಲಾಮಟ್ಟದಲ್ಲಿ ತಕ್ಷಣ ನೆರವು ಸಿಗಬೇಕು. ವಿಶೇಷ ರಕ್ಷಣಾ ಘಟಕಗಳು, ದಿನದ 24 ಗಂಟೆಯ ಸಹಾಯವಾಣಿ, ತಾತ್ಕಾಲಿಕ ಸುರಕ್ಷಿತ ವಸತಿ ಮತ್ತು ಉಚಿತ ಕಾನೂನು ನೆರವು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಶಾಲಾ-ಕಾಲೇಜುಗಳಲ್ಲಿ ಜಾತಿ ತಾರತಮ್ಯ, ಲಿಂಗ ಸಮಾನತೆ, ಒಪ್ಪಿಗೆ, ಸಂಬಂಧಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಕುರಿತು ಮುಕ್ತ ಚರ್ಚೆಗಳು ನಡೆಯಬೇಕು. ಪೋಷಕರಿಗೂ ಮಕ್ಕಳ ಆಯ್ಕೆಯನ್ನು ಗೌರವಿಸುವ ಮನೋಭಾವ ಬೆಳೆಸುವ ಅರಿವು ಮೂಡಿಸಬೇಕು.

ಸಾನಿಯಾ ಪಟೇಲ್‌ಳ ಸಾವು ಮತ್ತೊಂದು ಸುದ್ದಿಯಾಗಿ ಮರೆಯಾಗಬಾರದು. ಆಕೆಯ ಸಾವಿಗೆ ಕಾರಣವಾದ ಜಾತಿಯ ಅಹಂಕಾರ, ಕುಟುಂಬದ ಮರ್ಯಾದೆಯ ಹೆಸರಿನ ದಬ್ಬಾಳಿಕೆ ಮತ್ತು ಮಕ್ಕಳ ಬದುಕಿನ ಮೇಲೆ ಒಡೆತನ ಸಾಧಿಸುವ ಮನಸ್ಥಿತಿಯನ್ನು ನಾವು ಪ್ರಶ್ನಿಸಬೇಕು. ಪ್ರೀತಿ ಮತ್ತು ಮದುವೆಯ ಆಯ್ಕೆ ಯಾರೊಬ್ಬರ ಕುಟುಂಬದ ಗೌರವಕ್ಕೆ ಧಕ್ಕೆ ತರುವ ಅಪರಾಧವಲ್ಲ. ಅದಕ್ಕಾಗಿ ಒಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ.

ನೆನಪಿರಲಿ, ಮಕ್ಕಳಿಗೆ ಜನ್ಮ ನೀಡುವುದು ಪೋಷಕರ ಆಯ್ಕೆಯಾಗಿರಬಹುದು. ಆದರೆ ಆ ಮಕ್ಕಳ ಬದುಕು ಅವರದ್ದೇ. ಅವರ ಕನಸು, ಪ್ರೀತಿ, ಆಯ್ಕೆ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವುದೇ ನಿಜವಾದ ಪೋಷಕತ್ವ. ಮಕ್ಕಳು ಪೋಷಕರ ಆಸ್ತಿಯಲ್ಲ. ಅವರು ಸ್ವತಂತ್ರ ವ್ಯಕ್ತಿಗಳು. ಅವರ ಬದುಕಿನ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಪೋಷಕರಿಗೂ ಇಲ್ಲ, ಸಮಾಜಕ್ಕೂ ಇಲ್ಲ.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು