ಇನ್ಶೂರೆನ್ಸ್ ಇಲ್ಲದೆ ಟೋಲ್ ದಾಟುವ ವಾಹನಗಳಿಗೆ ಎಸ್ಎಮ್ಎಸ್ ಅಲರ್ಟ್: ಪ್ರಾಯೋಗಿಕ ಯೋಜನೆ ಆರಂಭಿಸಿದ ಎನ್ಎಚ್ಎಐ
ಲಿಂಕ್ ನಕಲಿಸಲಾಗಿದೆ ✓
ದೆಹಲಿ: ಮಾನ್ಯವಾದ ಥರ್ಡ್ ಪಾರ್ಟಿ ವಿಮೆ ಇಲ್ಲದ ವಾಹನಗಳು ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳನ್ನು ದಾಟಿದರೆ, ವಾಹನ ಮಾಲೀಕರ ಮೊಬೈಲ್ಗೆ ಎಸ್ಎಂಎಸ್ ಎಚ್ಚರಿಕೆ ಕಳುಹಿಸುವ ಪ್ರಾಯೋಗಿಕ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಆರಂಭಿಸಿದೆ.
ಕಡ್ಡಾಯವಾಗಿರುವ ಥರ್ಡ್ ಪಾರ್ಟಿ ವಿಮೆಯ ಅವಧಿ ಮುಗಿದಿದ್ದರೆ ಅಥವಾ ವಾಹನಕ್ಕೆ ವಿಮೆಯೇ ಇಲ್ಲದಿದ್ದರೆ, ಟೋಲ್ ಪ್ಲಾಜಾ ದಾಟಿದ ಕೆಲವೇ ನಿಮಿಷಗಳಲ್ಲಿ ಮಾಲೀಕರಿಗೆ ಸಂದೇಶ ಬರಲಿದೆ. ದೆಹಲಿಯ ಅರ್ಬನ್ ಎಕ್ಸ್ಟೆನ್ಷನ್ ರಸ್ತೆ–2 (ಯುಇಆರ್–2) ಮೇಲಿರುವ ಮುಂಡ್ಕಾ ಟೋಲ್ ಪ್ಲಾಜಾದಲ್ಲಿ ಈ ಯೋಜನೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ.
ವಾಹನ ಮಾಲೀಕರು ಸಮಯಕ್ಕೆ ಸರಿಯಾಗಿ ವಿಮೆ ನವೀಕರಿಸಿಕೊಳ್ಳುವಂತೆ ಪ್ರೇರೇಪಿಸುವುದು ಈ ಯೋಜನೆಯ ಉದ್ದೇಶ. ಪ್ರಸ್ತುತ ಈ ವ್ಯವಸ್ಥೆಯನ್ನು ಪರೀಕ್ಷಿಸುವ ಪ್ರಾಯೋಗಿಕ ಪ್ರಯತ್ನ ನಡೆಯುತ್ತಿದೆ.
ವಿಮೆಯ ಅವಧಿ ಮುಗಿದಿದ್ದರೆ ಅಥವಾ ವಾಹನಕ್ಕೆ ವಿಮೆ ಇಲ್ಲದಿದ್ದರೆ, ವಾಹನದ ನೋಂದಣಿ ಸಂಖ್ಯೆ, ಟೋಲ್ ಪ್ಲಾಜಾ ದಾಟಿದ ಸಮಯ ಮತ್ತು ವಿಮೆಯ ಅವಧಿ ಮುಗಿದಿರುವ ವಿವರಗಳೊಂದಿಗೆ ಮಾಲೀಕರಿಗೆ ಎಸ್ಎಂಎಸ್ ಕಳುಹಿಸಲಾಗುತ್ತದೆ. ವಿಮೆ ಮುಕ್ತಾಯಗೊಂಡ ದಿನಾಂಕವನ್ನೂ ಸಂದೇಶದಲ್ಲಿ ತಿಳಿಸಿ, ಮೋಟಾರು ವಾಹನ ಕಾಯ್ದೆಯಡಿ ದಂಡದಿಂದ ತಪ್ಪಿಸಿಕೊಳ್ಳಲು ವಿಮೆಯನ್ನು ನವೀಕರಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮೆ ಇಲ್ಲದ ವಾಹನಗಳು ರಸ್ತೆ ಅಪಘಾತಗಳಲ್ಲಿ ಸಿಲುಕಿದರೆ, ಸಂತ್ರಸ್ತರಿಗೆ ಪರಿಹಾರ ಪಡೆಯುವ ಅವಕಾಶಗಳು ಸೀಮಿತವಾಗುತ್ತವೆ. ಹೀಗಾಗಿ ವಾಹನ ಮಾಲೀಕರು ನಿಗದಿತ ಸಮಯಕ್ಕೆ ವಿಮೆ ನವೀಕರಿಸಿಕೊಳ್ಳುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ವಿಮೆ ಇಲ್ಲದಿದ್ದರೆ ಎಷ್ಟು ದಂಡ?
ಪ್ರಸ್ತುತ ನಿಯಮಗಳ ಪ್ರಕಾರ, ವಿಮೆ ಇಲ್ಲದ ವಾಹನದ ಮೊದಲ ಉಲ್ಲಂಘನೆಗೆ ಮೂಲ ವಿಮಾ ಪ್ರೀಮಿಯಂನ ಮೂರು ಪಟ್ಟು ಅಥವಾ ₹5,000 — ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.
ಎರಡನೇ ಬಾರಿ ಇದೇ ನಿಯಮ ಉಲ್ಲಂಘಿಸಿದರೆ, ಮೂಲ ಪ್ರೀಮಿಯಂನ ಐದು ಪಟ್ಟು ಅಥವಾ ₹10,000 — ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತವನ್ನು ದಂಡವಾಗಿ ವಿಧಿಸಲಾಗುತ್ತದೆ.
Peepal Media
Peepal Media · ದೇಶ ವಿಭಾಗ