ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಪ್ರೀತಿಯ ಅನುಭೂತಿ ಪಡೆಯದ ಗಂಡಸರು!ಬೆಂಗಳೂರಿನ ಮೊದಲ ಮುಖ್ಯ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಯಾರು?: 1996ರ ಬ್ಯಾಚ್‌ನ ಅಧಿಕಾರಿಗೆ ಹೊಸ ವ್ಯವಸ್ಥೆಯ ಹೊಣೆ!ರೈಲ್ವೆ ಕಾಮಗಾರಿ ಪ್ರಕ್ರಿಯೆ: ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಟಿಕೆಟ್‌ ಇಲ್ಲದೆ ವಂದೇ ಭಾರತ್ ಪ್ರಯಾಣ – 36 ಸಾವಿರ ದಂಡ ನೆಟ್ಟಿಗರ ಆಕ್ರೋಶಅಮೆರಿಕ–ಚೀನಾ–ರಷ್ಯಾ ಮಹಾಶಕ್ತಿಗಳ ಮುಖಾಮುಖಿ: ಶೆನ್‌ಜೆನ್‌ನಲ್ಲಿ ಟ್ರಂಪ್, ಕ್ಸಿ ಮತ್ತು ಪುಟಿನ್ ಭೇಟಿ; ಭಾರತದ ಪಾಲಿಗೆ ಇದು ಎಚ್ಚರಿಕೆಯ ಸಮಯವೇ?ರೈತರ ಸಂಕಷ್ಟದ ವಿಚಾರದಲ್ಲಿ ರಾಜಕೀಯ ಬೇಡ: ಕೇಂದ್ರದಿಂದ ಪರಿಹಾರ ಪಡೆಯಲು ಮೂರು ಬಾರಿ ಮನವಿ ಸಲ್ಲಿಸಿದ್ದೇವೆ – ಜಿ. ಪರಮೇಶ್ವರಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣದಲ್ಲಿ ವ್ಯತ್ಯಾಸ: ಕೇಂದ್ರಕ್ಕೆ ಕರ್ನಾಟಕ ಸರ್ಕಾರದಿಂದ ಪತ್ರ; ಐದು ಪ್ರಮುಖ ಬೇಡಿಕೆಗಳ ಮಂಡನೆಕಾಶ್ಮೀರದಲ್ಲಿ ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ: ಮಸೀದಿಯಲ್ಲಿ ಆಶ್ರಯ; ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾದ ಕಾರ್ಯಾಚರಣೆಭಾರತದ ಆರ್ಥಿಕತೆ ಸಂಕಷ್ಟದಲ್ಲಿದೆ, ಉತ್ಪಾದನಾ ವಲಯದ ಬೆನ್ನೆಲುಬು ಮುರಿದಿದೆ: ರಾಹುಲ್‌ ಗಾಂಧಿಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರಿಗೆ ಮತ್ತೊಂದು ಅವಕಾಶ: ಚುನಾವಣಾ ಆಯೋಗದ ಹೊಸ ಗಡುವುಆರ್‌ಎಫ್‌ಒ ಹೇಮಂತ್‌ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ – ಆದಾಯಕ್ಕಿಂತ ಅಧಿಕ ಆಸ್ತಿ ತೀವ್ರ ಶೋಧಆಗುಂಬೆ ಕಾಳಿಂಗ ಪ್ರಕರಣ: ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಪರಿಸರ ಸಂಘಟನೆಗಳ ತೀವ್ರ ಒತ್ತಾಯ5,000 ಮಾಸಿಕ ಗೌರವ ಧನಕ್ಕೆ ಆಗ್ರಹಿಸಿ ರಾಜಧಾನಿಯಲ್ಲಿ ಆಶಾ ಕಾರ್ಯಕರ್ತೆಯರ‌ – ಬೃಹತ್ ಪ್ರತಿಭಟನೆಜಾವೇದ್ ಅಖ್ತರ್‌ಗೆ ಮೌಲ್ವಿ ಟಾಂಗ್: ‘ಹೆಸರು ಬದಲಿಸಿಕೊಂಡು ರಾಮ್ ಪಾಲ್ ಆಗಿ’ ಎಂದು ವ್ಯಂಗ್ಯಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ: ಎಂಬಿ ಪಾಟೀಲ್ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ – ಹೆಚ್​​​​​ಡಿಕೆ ಗರಂಮಸೀದಿಯೊಳಗೆ ಅಡಗಿದ್ದ ಉಗ್ರನ ವಿರುದ್ಧ ಕಾರ್ಯಾಚರಣೆ ; ಕುಲ್ಗಾಮ್‌ನಲ್ಲಿ ಲಷ್ಕರ್ ಉಗ್ರ ಲತೀಫ್ ಭಟ್ ಹತKPSC ನೇಮಕಾತಿ ಹಗರಣ: ಸರ್ಕಾರಿ ಉದ್ಯೋಗದ ಕನಸಿಗೂ ಬೆಲೆ ನಿಗದಿ! ಆಯೋಗದ ಸದಸ್ಯೆಯೇ ಎಸ್‌ಐಟಿ ಬಲೆಗೆಜಾತಿ ಮತ್ತು ಮರ್ಯಾದೆಯ ಸಂಕೋಲೆಯಲ್ಲಿ ಯುವಜನರ ಸ್ವಾತಂತ್ರ್ಯಬಂಗಾಳ ಕೊಲ್ಲಿಯಲ್ಲಿ ಅಕ್ವಾನ್ ಚಂಡಮಾರುತ: ಆಂಧ್ರ ಕರಾವಳಿಗೆ ಅಪ್ಪಳಿಸಲು ಸಿದ್ಧತೆ; ಕರ್ನಾಟಕದಲ್ಲೂ ಮಳೆಯ ಮುನ್ಸೂಚನೆ

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣದಲ್ಲಿ ವ್ಯತ್ಯಾಸ: ಕೇಂದ್ರಕ್ಕೆ ಕರ್ನಾಟಕ ಸರ್ಕಾರದಿಂದ ಪತ್ರ; ಐದು ಪ್ರಮುಖ ಬೇಡಿಕೆಗಳ ಮಂಡನೆ

PPeepal Media

Peepal Media ರಾಜ್ಯ

• 2 ನಿಮಿಷದ ಓದು

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣದಲ್ಲಿ ವ್ಯತ್ಯಾಸ: ಕೇಂದ್ರಕ್ಕೆ ಕರ್ನಾಟಕ ಸರ್ಕಾರದಿಂದ ಪತ್ರ; ಐದು ಪ್ರಮುಖ ಬೇಡಿಕೆಗಳ ಮಂಡನೆ

ಬೆಂಗಳೂರು: ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣದ ಪ್ರಮಾಣ ಮತ್ತು ಇಂಧನ ವಿತರಣೆಯಲ್ಲಿನ ಅಳತೆಗಳ ಕುರಿತು ಗ್ರಾಹಕರ ಹಿತಾಸಕ್ತಿ ಕಾಪಾಡಲು ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಖಚಿತಪಡಿಸಬೇಕು ಎಂದು ಕರ್ನಾಟಕ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ. ಈ ಸಂಬಂಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ನವೆಂಬರ್ 17ರಂದು ಪತ್ರ ಬರೆದಿದ್ದಾರೆ.

ರಾಜ್ಯಾದ್ಯಂತ ನಡೆಸಿದ ತಪಾಸಣೆ ಮತ್ತು ಸ್ವತಂತ್ರ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ ಪೆಟ್ರೋಲ್‌ನಲ್ಲಿನ ಎಥನಾಲ್ ಪ್ರಮಾಣದಲ್ಲಿ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ವ್ಯತ್ಯಾಸ ಕಂಡುಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕ ಸರ್ಕಾರ ಎಥನಾಲ್ ಮಿಶ್ರಣ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಿಶ್ರಣ ಮತ್ತು ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯಾಗುವುದನ್ನು ವಿರೋಧಿಸುತ್ತಿದೆ ಎಂದು ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.

14 ಮಾದರಿಗಳಲ್ಲಿ 11ರಲ್ಲಿ ಶೇ.20ಕ್ಕಿಂತ ಹೆಚ್ಚು ಎಥನಾಲ್

2026ರ ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್), ಬಿಪಿಸಿಎಲ್, ಎಚ್‌ಪಿಸಿಎಲ್ ಮತ್ತು ಎಂಆರ್‌ಪಿಎಲ್‌ಗೆ ಸೇರಿದ 63 ಪೆಟ್ರೋಲ್ ಬಂಕ್‌ಗಳಲ್ಲಿ ಅಧಿಕಾರಿಗಳು ಮಾದರಿಗಳನ್ನು ಸಂಗ್ರಹಿಸಿದ್ದರು. ಈ ಪೈಕಿ 42 ಮಾದರಿಗಳ ಪರೀಕ್ಷಾ ವರದಿಗಳು ಮಾತ್ರ ಲಭ್ಯವಾಗಿದ್ದು, ಅವುಗಳಲ್ಲಿ ಯಾವುದರಲ್ಲೂ ಎಥನಾಲ್ ಪ್ರಮಾಣದ ವಿವರ ಇರಲಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದರಿಂದ ತೃಪ್ತರಾಗದ ರಾಜ್ಯ ಸರ್ಕಾರ, ರಾಷ್ಟ್ರೀಯ ಮಾನ್ಯತೆ ಪಡೆದ ಪರೀಕ್ಷಾ ಮತ್ತು ಮಾಪನಾಂಕ ಪ್ರಯೋಗಾಲಯಗಳ (ಎನ್‌ಎಬಿಎಲ್‌) ಮೂಲಕ ಹೊಸದಾಗಿ 14 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿತ್ತು. ಈ ಪೈಕಿ 11 ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚು ಎಥನಾಲ್ ಇರುವುದು ಪತ್ತೆಯಾಗಿದೆ. ಅತಿ ಹೆಚ್ಚು ಪ್ರಮಾಣವು ಶೇ.31ಕ್ಕಿಂತಲೂ ಹೆಚ್ಚಿತ್ತು ಎಂದು ಪತ್ರದಲ್ಲಿ ಹೇಳಲಾಗಿದೆ.

ಮಾದರಿಗಳಲ್ಲಿನ ಎಥನಾಲ್ ಪ್ರಮಾಣ ಶೇ.13.5ರಿಂದ ಶೇ.31.2ರವರೆಗೆ ವ್ಯತ್ಯಾಸ ಹೊಂದಿತ್ತು. ಕೇಂದ್ರ ಸರ್ಕಾರದ ಅಧಿಸೂಚನೆಯ ಪ್ರಕಾರ ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥನಾಲ್ ಮಿಶ್ರಣ ಇರಬೇಕು. ಆದರೆ, ಪರೀಕ್ಷೆಯಲ್ಲಿ ಕಂಡುಬಂದಿರುವ ಈ ವ್ಯತ್ಯಾಸವು ನಿಗದಿತ ಮಾನದಂಡ ಪಾಲನೆಯಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ.

ಪ್ರೀಮಿಯಂ ಪೆಟ್ರೋಲ್‌ನಲ್ಲೂ ಹೆಚ್ಚಿನ ಎಥನಾಲ್

ಲೀಟರ್‌ಗೆ ಸುಮಾರು ₹120ರಿಂದ ₹140ರವರೆಗೆ ಬೆಲೆ ಹೊಂದಿರುವ ಪ್ರೀಮಿಯಂ ಹೈ-ಸ್ಪೀಡ್ ಪೆಟ್ರೋಲ್‌ನಲ್ಲೂ ಹೆಚ್ಚಿನ ಪ್ರಮಾಣದ ಎಥನಾಲ್ ಪತ್ತೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಉತ್ತಮ ಗುಣಮಟ್ಟದ ಇಂಧನವೆಂದು ಹೆಚ್ಚಿನ ಬೆಲೆ ನೀಡಿ ಖರೀದಿಸುವ ಗ್ರಾಹಕರಿಗೂ ಎಥನಾಲ್ ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

ಇದರ ಜೊತೆಗೆ, ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಪ್ರಮಾಣದಲ್ಲಿನ ವ್ಯತ್ಯಾಸವನ್ನೂ ರಾಜ್ಯ ಸರ್ಕಾರ ಪರಿಶೀಲಿಸಿದೆ. ಕರ್ನಾಟಕದ ಒಟ್ಟು 5,946 ಪೆಟ್ರೋಲ್ ಬಂಕ್‌ಗಳ ಪೈಕಿ 805 ಬಂಕ್‌ಗಳಲ್ಲಿ ತಪಾಸಣೆ ನಡೆಸಲಾಗಿತ್ತು. ಪರಿಶೀಲಿಸಿದ 3,071 ನಳಿಕೆಗಳಲ್ಲಿ 2,618 ನಳಿಕೆಗಳು ನಿಗದಿತ ಅಳತೆಯ ನಿಖರತೆಯಿಂದ ವ್ಯತ್ಯಾಸ ಹೊಂದಿರುವುದು ಕಂಡುಬಂದಿದೆ. 101 ಬಂಕ್‌ಗಳಲ್ಲಿ ಅನುಮತಿಸಲಾದ ಗರಿಷ್ಠ ಮಿತಿಗಿಂತ ಹೆಚ್ಚಿನ ವ್ಯತ್ಯಾಸದೊಂದಿಗೆ ಇಂಧನ ವಿತರಣೆ ಮಾಡಿರುವುದು ಪತ್ತೆಯಾಗಿದ್ದು, ಅವುಗಳ ವಿರುದ್ಧ ಪ್ರಕರಣ ದಾಖಲಿಸಿ ₹6.66 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕೇಂದ್ರದ ಎರಡು ಅಧಿಸೂಚನೆಗಳಿಗೆ ರಾಜ್ಯದ ವಿರೋಧ

ಪೆಟ್ರೋಲ್ ಮತ್ತು ಡೀಸೆಲ್ ವಿತರಣಾ ಯಂತ್ರಗಳ ಕಡ್ಡಾಯ ಪರಿಶೀಲನೆಯ ಅವಧಿಯನ್ನು 12 ತಿಂಗಳಿಂದ 24 ತಿಂಗಳಿಗೆ ಹೆಚ್ಚಿಸುವ ಕೇಂದ್ರದ ಅಧಿಸೂಚನೆಗೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳ ಬದಲಿಗೆ ಖಾಸಗಿ ಪರೀಕ್ಷಾ ಕೇಂದ್ರಗಳಿಗೂ ಇಂಧನ ವಿತರಣಾ ಯಂತ್ರಗಳನ್ನು ಪರಿಶೀಲಿಸುವ ಅವಕಾಶ ನೀಡುವ ಮತ್ತೊಂದು ಅಧಿಸೂಚನೆಯನ್ನೂ ರಾಜ್ಯ ಸರ್ಕಾರ ಒಪ್ಪಿಲ್ಲ.

ಈ ಬದಲಾವಣೆಗಳು ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯುಂಟುಮಾಡಬಹುದು ಎಂಬ ಕಾರಣಕ್ಕೆ, ರಾಜ್ಯದಲ್ಲಿ ಪ್ರತಿ ವರ್ಷ ಸರ್ಕಾರಿ ಅಧಿಕಾರಿಗಳ ಮೂಲಕವೇ ಎಲ್ಲ ಇಂಧನ ವಿತರಣಾ ಯಂತ್ರಗಳ ಪರಿಶೀಲನೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಎರಡೂ ಅಧಿಸೂಚನೆಗಳನ್ನು ಮರುಪರಿಶೀಲಿಸುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರಿಗೂ ರಾಜ್ಯ ಸರ್ಕಾರ ಪತ್ರ ಬರೆದಿರುವುದಾಗಿ ಉಲ್ಲೇಖಿಸಲಾಗಿದೆ.

ಕೇಂದ್ರದ ಮುಂದೆ ಐದು ಬೇಡಿಕೆಗಳು

ಗ್ರಾಹಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೇಂದ್ರದ ಮುಂದೆ ಐದು ಪ್ರಮುಖ ಬೇಡಿಕೆಗಳನ್ನು ಇರಿಸಿದೆ.

  1. ಪ್ರತಿ ಪೆಟ್ರೋಲ್ ಬಂಕ್‌ನಲ್ಲಿ ಮಾರಾಟ ಮಾಡುವ ಇಂಧನದಲ್ಲಿನ ನಿಜವಾದ ಎಥನಾಲ್ ಪ್ರಮಾಣವನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು.
  2. ಗ್ರಾಹಕರಿಗೆ ನೀಡುವ ಪ್ರತಿಯೊಂದು ಬಿಲ್‌ನಲ್ಲೂ ಎಥನಾಲ್ ಪ್ರಮಾಣವನ್ನು ನಮೂದಿಸಬೇಕು.
  3. ವಾಹನಗಳ ಹೊಂದಾಣಿಕೆಗೆ ಅನುಗುಣವಾಗಿ ಇ-10 ಮತ್ತು ಎಥನಾಲ್ ರಹಿತ ಪೆಟ್ರೋಲ್ ಅನ್ನು ಇ-20 ಪೆಟ್ರೋಲ್ ಜೊತೆಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಬೇಕು.
  4. ಎನ್‌ಎಬಿಎಲ್‌ ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯಗಳ ಮೂಲಕ ಇಂಧನದ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುವ ವ್ಯವಸ್ಥೆ ರೂಪಿಸಬೇಕು.
  5. ನಿಗದಿತ ಮಿತಿಗಿಂತ ಹೆಚ್ಚಿನ ಎಥನಾಲ್ ಮಿಶ್ರಣದಿಂದ ವಾಹನಗಳಿಗೆ ಹಾನಿಯಾದರೆ ಗ್ರಾಹಕರಿಗೆ ಪರಿಹಾರ ನೀಡಲು ವಿಶೇಷ ಇ-20 ಪರಿಹಾರ ನಿಧಿ ಸ್ಥಾಪಿಸಬೇಕು.

ಎಥನಾಲ್ ಮಿಶ್ರಣ ನೀತಿಯನ್ನು ಜಾರಿಗೊಳಿಸುವಾಗ ವಾಹನಗಳು, ಪೆಟ್ರೋಲ್ ಬಂಕ್‌ಗಳ ಮೂಲಸೌಕರ್ಯ, ಸಂಗ್ರಹಣೆ ಮತ್ತು ಪರೀಕ್ಷಾ ವ್ಯವಸ್ಥೆಗಳನ್ನು ಸಿದ್ಧಪಡಿಸಲು ಸಾಕಷ್ಟು ಸಮಯ ನೀಡಬೇಕು ಎಂದು ರಾಜ್ಯ ಸರ್ಕಾರ ಪತ್ರದಲ್ಲಿ ಒತ್ತಾಯಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ಗ್ರಾಹಕರ ಹಿತಾಸಕ್ತಿ, ಇಂಧನದ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು