ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಚರಿತ್ರೆಯ ಮೌನ ಸಾಕ್ಷಿಗಳು: ಭಾಷೆಗಳ ಗಡಿ ದಾಟಿದ ರೂಮಿ; ಪರ್ಷಿಯನ್‌ನಿಂದ ವಿಶ್ವದ ಹೃದಯಗಳವರೆಗೆ ಒಂದು ಪ್ರೇಮಯಾನಕಾರ್ಯದರ್ಶಿ ಹುದ್ದೆ | ಸಿಎಂ ಕಚೇರಿಯಿಂದ ಕರೆ ಬಂದ ನಂತರ ನಿರ್ಧರಿಸುವೆ: ತನ್ವೀರ್‌ ಸೇಠ್ದೀಪಾವಳಿ ವೇಳೆ ಪಟಾಕಿ ಸಿಡಿಸಿದ ಪ್ರಕರಣ: ಪೊಲೀಸರ ವಿರುದ್ಧ MIT ವಿದ್ಯಾರ್ಥಿಗಳಿಂದ ಸಿಎಂಗೆ ದೂರುರವಿ ಹಂಜ್ ಬಂಧನ ಸ್ವಾಗತಾರ್ಹ; ಆತನ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಿ: ಟಿ.ಎ. ನಾರಾಯಣ ಗೌಡ ಆಗ್ರಹಡಾರ್ಕ್ ವೆಬ್‌ನಲ್ಲಿ ಅಗ್ನಿವೀರ್ ದತ್ತಾಂಶ ಮಾರಾಟಕ್ಕೆ ಯತ್ನ: 14 ವರ್ಷದ ಬಾಲಕನನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರುಬಸವ ಮಂಟಪ ಕೃತಿ ವಿವಾದ: ಲೇಖಕ ರವಿ ಹಂಜ್ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿಆರ್‌ಎಫ್ ಅಧಿಕಾರಿ –  ಅರಣ್ಯಾಧಿಕಾರಿ ವಿಶ್ವನಾಥ್ ಲೋಕಾ ಬಲೆಗೆಕಿವೀಸ್‌ ವಿರುದ್ಧ ಕನ್ನಡಿಗ ಕೆ.ಎಲ್‌ ರಾಹುಲ್‌ ಅಬ್ಬರ, ಅಮೋಘ ಶತಕ – ಐತಿಹಾಸಿಕ ದಾಖಲೆಇ-ಕೆವೈಸಿ ಯಶಸ್ವಿಯಾದರೂ ‘ನಿಧನ’ ಎಂದು ತೋರಿಸಿದ ತಂತ್ರಾಂಶ – ಗೃಹಲಕ್ಷ್ಮಿ ಯೋಜನೆಯ ಮಹಾಲೋಪಡಿ.1ರೊಳಗೆ ರೈತರ ಖಾತೆಗೆ 5,000 ರೂ. ಬರ ಪರಿಹಾರ – ಡಾ. ಜಿ. ಪರಮೇಶ್ವರ್ಹೈದರಾಬಾದ್‌ ಕಾಂಗ್ರೆಸ್ ಖಾತೆ ನಿರ್ಬಂಧ ಮೆಟಾ ಕಚೇರಿ – ಧ್ವಂಸಗೊಳಿಸಿದ ಕಾರ್ಯಕರ್ತರುಹೊಸ ಪಾಸ್‌ಪೋರ್ಟ್‌ಗಾಗಿ ಶೇಖ್‌ ಹಸೀನಾ ಮತ್ತೊಮ್ಮೆ ಮನವಿ; ಬಾಂಗ್ಲಾದೇಶ ಸರ್ಕಾರಕ್ಕೆ ತುರ್ತು ಪತ್ರಐದನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಹೋರಾಟ: 15 ಸಾವಿರ ರೂ. ಗೌರವಧನಕ್ಕೆ ಲಿಖಿತ ಆದೇಶಕ್ಕೆ ಪಟ್ಟುಬಿಜೆಪಿ ಶಾಸಕರ ನಡೆಗೆ ವಿಜಯೇಂದ್ರ ಗರಂ: ಸಿಎಂ ಔತಣಕೂಟದಲ್ಲಿ ಭಾಗವಹಿಸಿದ್ದಕ್ಕೆ ಆಕ್ಷೇಪಕ್ಷೇತ್ರ ಪುನರ್ವಿಂಗಡಣೆಗೆ ಕಾಂಗ್ರೆಸ್ ನಾಲ್ಕು ಅಂಶಗಳ ಸೂತ್ರ; 543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿ, 25 ವರ್ಷ ಬದಲಾವಣೆಗೆ ವಿರಾಮ!ನನಗೂ ಮೊಹಮ್ಮದ್‌ ಸಿರಾಜ್‌ ಆಟ ಇಷ್ಟ, ಆದರೆ ನಮ್ಮ ಇಷ್ಟಕಷ್ಟಗಳಿಗೆ ಇಲ್ಲಿ ಬೆಲೆಯಿಲ್ಲ: ಕಪಿಲ್‌ ದೇವ್ಮಣಿಪುರದಲ್ಲಿ ಕಳ್ಳಭಟ್ಟಿ ದುರಂತ: 15 ಮಂದಿ ಸಾವು, 150ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು; ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕವಿವಾದಾತ್ಮಕ ಭಾಷಣ : ಪ್ರತಾಪ್ ಸಿಂಹಗೆ ಹೈಕೋರ್ಟ್‌ನಲ್ಲಿ ಹಿನ್ನಡೆ; ಕ್ರಿಮಿನಲ್ ಪ್ರಕರಣ ರದ್ದತಿಗೆ ಅರ್ಜಿ ತಿರಸ್ಕಾರಕಾವೇರಿ ವಿವಾದ: ತಮಿಳುನಾಡಿನ ಹೆಚ್ಚುವರಿ ನೀರಿನ ಬೇಡಿಕೆಗೆ ಸುಪ್ರೀಂ ಕೋರ್ಟ್ ತಡೆAPEC ವಿಚಾರದಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ವಾಗ್ದಾಳಿ; ಭಾರತದ ಸದಸ್ಯತ್ವದ ಕಥೆ ಏನಾಯ್ತು?

ಚರಿತ್ರೆಯ ಮೌನ ಸಾಕ್ಷಿಗಳು: ಭಾಷೆಗಳ ಗಡಿ ದಾಟಿದ ರೂಮಿ; ಪರ್ಷಿಯನ್‌ನಿಂದ ವಿಶ್ವದ ಹೃದಯಗಳವರೆಗೆ ಒಂದು ಪ್ರೇಮಯಾನ

PPeepal Media Desk

Peepal Media Desk ಅಂಕಣ

• 5 ನಿಮಿಷದ ಓದು

ಚರಿತ್ರೆಯ ಮೌನ ಸಾಕ್ಷಿಗಳು: ಭಾಷೆಗಳ ಗಡಿ ದಾಟಿದ ರೂಮಿ; ಪರ್ಷಿಯನ್‌ನಿಂದ ವಿಶ್ವದ ಹೃದಯಗಳವರೆಗೆ ಒಂದು ಪ್ರೇಮಯಾನ

“..ರೂಮಿ ಹುಟ್ಟಿದ್ದು ಪರ್ಷಿಯನ್ ಭಾಷೆಯಲ್ಲಿ, ಬೆಳೆದದ್ದು ಅರೇಬಿಕ್ ಜ್ಞಾನದಲ್ಲಿ, ಹರಿದದ್ದು ಟರ್ಕಿಯ ಮಣ್ಣಿನಲ್ಲಿ, ಆದರೆ ಇಂದು ಅವರು ತಲುಪಿರುವುದು ಪ್ರಪಂಚದ ಮೂಲೆಮೂಲೆಗಳಲ್ಲಿ..” ಲೇಖಕರಾದ ಗೈಬ್ ಷಾ ಪಟೇಲ್ ಅವರ ಬರಹದಲ್ಲಿ

ರೂಮಿಯನ್ನು ಒಂದು ಭಾಷೆಗೆ, ಒಂದು ದೇಶಕ್ಕೆ, ಒಂದು ಧರ್ಮಕ್ಕೆ ಕಟ್ಟಿಹಾಕಲು ಸಾಧ್ಯವಿಲ್ಲ. ಅವರು ಹುಟ್ಟಿದ್ದು ಪರ್ಷಿಯನ್ ಭಾಷೆಯಲ್ಲಿ, ಬೆಳೆದದ್ದು ಅರೇಬಿಕ್ ಜ್ಞಾನದಲ್ಲಿ, ಹರಿದದ್ದು ಟರ್ಕಿಯ ಮಣ್ಣಿನಲ್ಲಿ, ಆದರೆ ಇಂದು ಅವರು ತಲುಪಿರುವುದು ಪ್ರಪಂಚದ ಮೂಲೆಮೂಲೆಗಳಲ್ಲಿ.

ಜಾತ್ಯಾತೀತವಾಗಿ ಧರ್ಮಾತೀತವಾಗಿ ಜಗತ್ತಿನಾದ್ಯಂತ ಎಲ್ಲರೂ ರೂಮಿಯನ್ನು ತಮ್ಮವರೆಂದು ಭಾವಿಸುವುದಕ್ಕೆ ಕಾರಣ, ಅವರ ಸಾಹಿತ್ಯವು ಧರ್ಮದ ಗೋಡೆಯನ್ನು ದಾಟಿ ಮನುಷ್ಯನ ಒಳಗಿನ ಪ್ರಶ್ನೆಯನ್ನು ಮುಟ್ಟುವುದೇ ಆಗಿದೆ. “ನಾನು ಯಾರು? ನನ್ನ ಮೂಲ ಯಾವುದು? ಪ್ರೇಮ ಎಂದರೇನು?” – ಈ ಪ್ರಶ್ನೆಗಳಿಗೆ ಭಾಷೆಯಿಲ್ಲ. ಅದಕ್ಕಾಗಿಯೇ ರೂಮಿ ಪ್ರತಿಯೊಂದು ಭಾಷೆಯಲ್ಲಿ ಮತ್ತೆ ಹುಟ್ಟುತ್ತಲೇ ಇದ್ದಾರೆ.

ಪರ್ಷಿಯನ್: ರೂಮಿಯ ಮೂಲ ಭಾಷೆ, ಆತ್ಮದ ಭಾಷೆ:-
ರೂಮಿಯವರ ಮೂಲ ಭಾಷೆ ಪರ್ಷಿಯನ್. ಅವರ ಎರಡು ಮಹಾಕೃತಿಗಳಾದ ‘ಮಸ್ನವಿ-ಯೆ ಮಾನವಿ’ ಮತ್ತು ‘ದೀವಾನ್-ಎ ಶಮ್ಸ್-ಎ ತಬ್ರೀಜಿ’ (ಅವರಗುರುಗಳಾದ ಶಮ್ಸ್ ತಬ್ರೇಜರ ನೆನಪಿನಲ್ಲಿ ಬರೆದದ್ದು) ಎರಡೂ ಪರ್ಷಿಯನ್ ಭಾಷೆಯಲ್ಲೇ ರಚಿತವಾದವು. ಮಸ್ನವಿಯಲ್ಲಿ 26,000ಕ್ಕೂ ಹೆಚ್ಚು ದ್ವಿಪದಿಗಳಿವೆ. ದೀವಾನ್-ಎ ಶಮ್ಸ್‌ನಲ್ಲಿ ಶಮ್ಸ್‌ನ ವಿರಹವಿದೆ. ಅಲ್ಲಿ ಕವಿ ಇಲ್ಲ, ಪ್ರೇಮಿ ಮಾತ್ರ ಇದ್ದಾನೆ. ಪರ್ಷಿಯನ್ ಭಾಷೆಯ ಮೃದುತ್ವ, ಸಂಗೀತ, ಪ್ರೇಮದ ಪದಗಳು ರೂಮಿಯ ಕೈಯಲ್ಲಿ ಬೆಂಕಿಯಾಗಿ ಬದಲಾದವು.

ರೂಮಿಯನ್ನು ತುರ್ಕಿಯಲ್ಲಿ ಇಂದಿಗೂ ಶಾಲೆಗಳಲ್ಲಿ, ಮದರಸಾಗಳಲ್ಲಿ, ಸೂಫಿ ಖಾನ್ಖಾಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಓದಲಾಗುತ್ತದೆ. ಇರಾನ್, ಅಫ್ಘಾನಿಸ್ತಾನ, ತಜಿಕಿಸ್ತಾನ್‌ನಲ್ಲಿ ರೂಮಿ ಕೇವಲ ಕವಿಯಲ್ಲ, ಮನೆಮನೆಯಲ್ಲಿ ಹೇಳುವ ಹೆಸರು.

“ಬಿಶ್ನೋ ಅಝ್ ನೇ ಚೂನ್ ಹಿಕಾಯತ್ ಮೇಕುನದ್,
ಅಝ್ ಜುದಾಯಿಹಾ ಶಿಕಾಯತ್ ಮೇಕುನದ್.”

“ಈ ಕೊಳಲಿನ ಕಥೆಯನ್ನು ಕೇಳು; ಅದು ತನ್ನ ಬೇರ್ಪಟ್ಟಿಕೆಯ ನೋವನ್ನು ಹೇಳುತ್ತಿದೆ.”

ಕೊಳಲಿನಿಂದ ಬರುವ ಮಧುರವಾದ ಧ್ವನಿ ವಾಸ್ತವದಲ್ಲಿ ಅದರ ವಿರಹದ ಅಳು. ಅದು ತನ್ನ ಮೂಲವನ್ನು ಸೇರಲು ಹಂಬಲಿಸುತ್ತಿದೆ. ಹಾಗೆಯೇ ಮನುಷ್ಯನ ಹೃದಯದಲ್ಲಿನ ಅಶಾಂತಿ, ಹುಡುಕಾಟ, ಕೊರತೆ – ಇವೆಲ್ಲವೂ ತನ್ನ ಮೂಲದಿಂದ ದೂರವಾದ ಆತ್ಮದ ನೋವೇ ಆಗಿದೆ.
ಈ ಒಂದೇ ಸಾಲು ಪರ್ಷಿಯನ್ ಸಾಹಿತ್ಯದ ಇತಿಹಾಸದಲ್ಲಿ ಬಹು ಪ್ರಸಿದ್ಧಿ ಪಡೆಯಿತು.

ಅರೇಬಿಕ್: ಜ್ಞಾನದ ಭಾಷೆಯಿಂದ ಪ್ರೇಮದ ಭಾಷೆಗೆ;
ರೂಮಿಯವರು ಅರೇಬಿಕ್ ಭಾಷೆಯಲ್ಲಿ ಆಳವಾದ ಪಾಂಡಿತ್ಯ ಹೊಂದಿದ್ದರು. ಅವರು ಅಲೆಪ್ಪೊ ಮತ್ತು ದಮಾಸ್ಕಸ್‌ನಲ್ಲಿ ಫಿಖ್, ತಫ್ಸೀರ್, ಹದೀಸ್, ಕಲಾಂ ಶಾಸ್ತ್ರಗಳನ್ನು ಅಭ್ಯಾಸ ಮಾಡಿದ್ದರು. ಅವರ ತಂದೆ ಬಹಾಉದ್ದೀನ್ ವಲದ್ ಅವರ ಉಪದೇಶಗಳು ಅರೇಬಿಕ್ ಮತ್ತು ಪರ್ಷಿಯನ್ ಎರಡರಲ್ಲೂ ಇದ್ದವು. ಅರೇಬಿಕ್ ಜಗತ್ತಿನಲ್ಲಿ ರೂಮಿಯನ್ನು ಮೊದಲು ಒಬ್ಬ ವಿದ್ವಾಂಸನಾಗಿ ಗುರುತಿಸಲಾಯಿತು. ವಿದ್ವಾಂಸರಾಗಿ ತತ್ವಜ್ಞಾನಿಯಾಗಿ ಕವಿಯಾಗಿ ಖ್ಯಾತಿ ಹೊಂದಿದರು .

ಈಜಿಪ್ಟ್, ಸಿರಿಯಾ, ಇರಾಕ್, ಲೆಬನಾನ್, ಮೊರಾಕ್ಕೊಗಳಲ್ಲಿ ರೂಮಿಯ ಕವಿತೆಗಳು ಸೂಫಿ ಮಜ್ಲಿಸ್‌ಗಳಲ್ಲಿ ಹಾಡಲ್ಪಡುತ್ತವೆ. ಅರೇಬಿಕ್ ಸೂಫಿ ಕವಿಗಳಾದ ಇಬ್ನ್ ಅರಬಿ, ಇಬ್ನ್ ಅಲ್-ಫಾರಿದ್ ಅವರ ಚಿಂತನೆಗಳ ಜೊತೆಗೆ ರೂಮಿಯ ಚಿಂತನೆಯನ್ನು ಹೋಲಿಸಿ ಓದಲಾಗುತ್ತದೆ.

ಅರೇಬಿಕ್‌ನಲ್ಲಿ ರೂಮಿಯ ಪ್ರಸಿದ್ಧ ಸಂದೇಶವೆಂದರೆ: ಇಷ್ಕ್ – ಪ್ರೇಮವೇ ಜ್ಞಾನಕ್ಕಿಂತ ದೊಡ್ಡದು. ಜ್ಞಾನವು ದಾರಿ ತೋರಿಸಬಹುದು, ಆದರೆ ಪ್ರೇಮವೇ ಆ ದಾರಿಯಲ್ಲಿ ನಡೆಸುತ್ತದೆ.

ಟರ್ಕಿಶ್: ಕೊನ್ಯಾದ ಮಣ್ಣಿನಲ್ಲಿ ಬೆಳೆದ ರೂಮಿ
ರೂಮಿ ತಮ್ಮ ಜೀವನದ ಬಹುಭಾಗವನ್ನು ಕಳೆದದ್ದು ಇಂದಿನ ಟರ್ಕಿಯ ಕೊನ್ಯಾದಲ್ಲಿ. ಆಗ ಆ ಪ್ರದೇಶವನ್ನು ‘ರೂಮ್’ ಎಂದು ಕರೆಯಲಾಗುತ್ತಿದ್ದುದರಿಂದಲೇ ಅವರಿಗೆ ‘ರೂಮಿ’ ಎಂಬ ಹೆಸರು ಬಂತು. ಟರ್ಕಿಯಲ್ಲಿ ಅವರನ್ನು ‘ಮೆವ್ಲಾನಾ’ ಅಂದರೆ ‘ನಮ್ಮ ಗುರು’ಎಂದು ಕರೆಯುತ್ತಾರೆ.

ಟರ್ಕಿಶ್ ಭಾಷೆಯಲ್ಲಿ ರೂಮಿಯ ಸಾಹಿತ್ಯವು ಕೇವಲ ಪುಸ್ತಕದಲ್ಲಿ ಉಳಿಯಲಿಲ್ಲ. ಅದು ‘ಸಮಾ’ಸುತ್ತುವ ದರ್ವೀಶರ ಆಚರಣೆಯಾಗಿ, ಸಂಗೀತವಾಗಿ, ಜೀವನಶೈಲಿಯಾಗಿ ಬದಲಾಯಿತು. ಮೆವ್ಲೆವಿ ತರೀಖತ್ ಎಂಬ ಸೂಫಿ ಪರಂಪರೆ ರೂಮಿಯ ಹೆಸರಿನಲ್ಲಿ ಇಂದಿಗೂ ಕೊನ್ಯಾದಲ್ಲಿ ಜೀವಂತವಾಗಿದೆ.

ಪ್ರತಿ ವರ್ಷ ಡಿಸೆಂಬರ್ 17ರಂದು ಕೊನ್ಯಾದಲ್ಲಿ ನಡೆಯುವ ‘ಶಬ್-ಎ ಉರೂಸ್’ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಜನರು ಬರುತ್ತಾರೆ. ಅಲ್ಲಿ ಟರ್ಕಿಶ್ ಭಾಷೆಯಲ್ಲಿ ರೂಮಿಯ ಕವಿತೆಗಳನ್ನು ಹಾಡಲಾಗುತ್ತದೆ, ಸಮಾ ನಡೆಯುತ್ತದೆ, ಪ್ರೇಮದ ಮಾತುಗಳು ಕೇಳಿಬರುತ್ತವೆ.

ಉರ್ದು: ಹಿಂದೂಸ್ತಾನದ ಹೃದಯದಲ್ಲಿ ರೂಮಿ
ಉರ್ದು ಭಾಷೆಯಲ್ಲಿ ರೂಮಿ ಎಂದರೆ ಪ್ರೇಮದ ಇನ್ನೊಂದು ಹೆಸರು. ಅಲ್ಲಾಮಾ ಇಕ್ಬಾಲರು ರೂಮಿಯನ್ನು ತಮ್ಮ ಆಧ್ಯಾತ್ಮಿಕ ಗುರು ಎಂದು ಕರೆದರು. ಇಕ್ಬಾಲರು ತಮ್ಮ ಕಾವ್ಯದಲ್ಲಿ ರೂಮಿಯನ್ನು ‘ಪೀರ್-ಎ ರೂಮಿ’ಎಂದು ಸಂಬೋಧಿಸಿದರು.

ಇಕ್ಬಾಲ್ ಹೇಳುತ್ತಾರೆ:
“ರೂಮಿಯವರಿಂದ ನಾನು ಆತ್ಮಜಾಗೃತಿಯನ್ನು ಕಲಿತೆ.”
ಉರ್ದು ಭಾಷೆಯಲ್ಲಿ ಮಸ್ನವಿಯ ಅನೇಕ ಅನುವಾದಗಳು ಬಂದಿವೆ. ಮುಶಾಯರಾಗಳಲ್ಲಿ ರೂಮಿಯ ಶೇರ್‌ಗಳನ್ನು ಹೇಳಲಾಗುತ್ತದೆ.

ರೂಮಿಯ ಪ್ರಸಿದ್ಧ ಸಾಲು:
“ಇಷ್ಕ್ ಅಸ್ತ್ ಬರ್ ಆಸ್ಮಾನ್ ಪರೀದನ್,
ಸದ್ ಪರ್ದಾ ಬ ಹರ್ ನಫಸ್ ದರೀದನ್”
ಪ್ರೇಮವೆಂದರೆ ಆಕಾಶಕ್ಕೆ ಹಾರುವುದು; ಪ್ರತಿ ಉಸಿರಿನಲ್ಲೂ ನೂರು ಪರದೆಗಳನ್ನು ಹರಿದುಹಾಕುವುದು.

ಇಂಗ್ಲಿಷ್: ಜಗತ್ತಿಗೆ ರೂಮಿಯನ್ನು ಪರಿಚಯಿಸಿದ ಭಾಷೆ
ಇಂದು ಜಗತ್ತಿನಲ್ಲಿ ರೂಮಿಯನ್ನು ಅತಿ ಹೆಚ್ಚು ಜನರು ಓದುವುದು ಇಂಗ್ಲಿಷ್ ಭಾಷೆಯಲ್ಲಿ. ಅಮೆರಿಕಾದಲ್ಲಿ ರೂಮಿ ಅತಿ ಹೆಚ್ಚು ಮಾರಾಟವಾಗುವ ಕವಿ ಎಂದು ಹೇಳಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಕೋಲ್ಮನ್ ಬಾರ್ಕ್ಸ್ ಅವರ ಅನುವಾದಗಳು. ಅವರು ರೂಮಿಯ ಕವಿತೆಗಳನ್ನು ಸರಳ, ಆಧುನಿಕ ಇಂಗ್ಲಿಷ್‌ನಲ್ಲಿ ಅನುವಾದಿಸಿದರು. ಅವರ ಅನುವಾದದಲ್ಲಿ ರೂಮಿ ಒಬ್ಬ ಧಾರ್ಮಿಕ ವಿದ್ವಾಂಸನಾಗಿ ಅಲ್ಲ, ಒಬ್ಬ ಮಾನವೀಯ ಪ್ರೇಮಿಯಾಗಿ ಕಾಣಿಸುತ್ತಾರೆ.

ಇಂಗ್ಲಿಷ್‌ನಲ್ಲಿ ರೂಮಿಯ ಸಂದೇಶವು ಧರ್ಮವನ್ನು ಮೀರಿದ ಆಧ್ಯಾತ್ಮಿಕತೆ ಆಯಿತು. ಯೋಗ ಕೇಂದ್ರಗಳಲ್ಲಿ, ಧ್ಯಾನ ಶಿಬಿರಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಮದುವೆ ಕಾರ್ಡ್‌ಗಳಲ್ಲಿ, ಸಿನಿಮಾಗಳಲ್ಲಿ ರೂಮಿಯ ಸಾಲುಗಳು ಕಾಣಿಸಿಕೊಳ್ಳುತ್ತವೆ.

“Out beyond ideas of wrongdoing and rightdoing there is a field. I’ll meet you there.”
“ತಪ್ಪು ಮತ್ತು ಸರಿ ಎಂಬ ಕಲ್ಪನೆಗಳಾಚೆ ಒಂದು ಮೈದಾನವಿದೆ. ಅಲ್ಲಿ ನಾನು ನಿನ್ನನ್ನು ಭೇಟಿಯಾಗುತ್ತೇನೆ.” ಈ ಒಂದೇ ಸಾಲು ಇಂಗ್ಲಿಷ್ ಜಗತ್ತಿನಲ್ಲಿ ರೂಮಿಯನ್ನು ಅಮರನನ್ನಾಗಿ ಮಾಡಿತು. ರೆನಾಲ್ಡ್ ನಿಕಲ್ಸನ್ ಅವರ ಮಸ್ನವಿಯ ವಿದ್ವತ್ಪೂರ್ಣ ಇಂಗ್ಲಿಷ್ ಅನುವಾದವು ಇಂದಿಗೂ ಸಂಶೋಧಕರಿಗೆ ಆಧಾರ ಗ್ರಂಥವಾಗಿದೆ.

ಕನ್ನಡ: ನಮ್ಮ ನೆಲದಲ್ಲಿ ರೂಮಿ
ಕನ್ನಡದಲ್ಲಿ ರೂಮಿಯನ್ನು ಡಿ. ಆರ್. ನಾಗರಾಜ್ ಅವರು ‘ವಸಂತ ಸ್ಮೃತಿ’ ಮೂಲಕ, ಸ್ವಾಲಿಹ್ ತೋಡಾರ್ ಅವರು ‘ರೂಮಿ ಕತೆಗಳು’ ಮೂಲಕ ತಂದಿದ್ದಾರೆ. ಚೇತನಾ ತೀರ್ಥಹಳ್ಳಿ ‘ರೂಮಿಯ ಮಗಳು’ ಕಾದಂಬರಿ, ಎನ್. ಸಿ. ಮಹೇಶ್ ‘ಸಾಕು ತಂದೆ ರೂಮಿ’ ನಾಟಕ ಬರೆದಿದ್ದಾರೆ. ಅಬ್ದುಲ್ ಮಜೀದ್ ಖಾನ್, ಲಕ್ಕೂರು ಆನಂದ, ಚಿದಂಬರ ನರೇಂದ್ರ, ಸುಕನ್ಯಾ ಕನಾರಳ್ಳಿ ಮೊದಲಾದವರು ರೂಮಿಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಜಗಜ್ಯೋತಿ ಬಸವಣ್ಣ, ಅಕ್ಕಮಹಾದೇವಿಯವರಂತೆ ರೂಮಿಯೂ ‘ನಾನು’ ಎಂಬ ಅಹಂಕಾರ ಬಿಟ್ಟು ಪ್ರೇಮದಲ್ಲಿ ಕರಗಲು ಕರೆಯುತ್ತಾರೆ. ಕನ್ನಡದಲ್ಲಿ ರೂಮಿಯ ಸಾಹಿತ್ಯವು ನಿಧಾನವಾಗಿ ಆದರೆ ಆಳವಾಗಿ ಬೇರೂರುತ್ತಿದೆ.

ಹಿಂದಿ ಮತ್ತು ಭಾರತದ ಇತರ ಭಾಷೆಗಳಲ್ಲಿ;
ಹಿಂದಿ:ಹಿಂದಿಯಲ್ಲಿ ರೂಮಿಯನ್ನು ‘ಮೌಲಾನಾ ರೂಮ್’ ಎಂದು ಕರೆಯುತ್ತಾರೆ. ಹಿಂದಿ ಭಾಷೆಯಲ್ಲಿ ಮಸ್ನವಿಯ ಅನೇಕ ಅನುವಾದಗಳು, ಕವ್ವಾಲಿಗಳಿವೆ.

ಜಗತ್ತಿನ ಇತರ ಭಾಷೆಗಳು: ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಚೈನೀಸ್, ಜಪಾನೀಸ್
ಫ್ರೆಂಚ್: ಫ್ರಾನ್ಸ್‌ನಲ್ಲಿ ರೂಮಿಯನ್ನು ಅಸ್ತಿತ್ವವಾದಿ ಚಿಂತಕನಂತೆ ಓದಲಾಗುತ್ತದೆ. ಎವಾ ಡಿ ವಿಟ್ರೆ-ಮೇಯೆರೊವಿಚ್ ಅವರ ಫ್ರೆಂಚ್ ಅನುವಾದಗಳು ಯುರೋಪಿನಲ್ಲಿ ರೂಮಿಯನ್ನು ಪರಿಚಯಿಸಿದವು. ಜರ್ಮನಿಯಲ್ಲಿ ರೂಮಿಯನ್ನು ಗೋಥೆ ಅವರ ಜೊತೆಗೆ ಹೋಲಿಸಲಾಗುತ್ತದೆ. ಗೋಥೆ ತಮ್ಮ ‘ವೆಸ್ಟ್-ಈಸ್ಟರ್ನ್ ದಿವಾನ್’ನಲ್ಲಿ ರೂಮಿಯಿಂದ ಪ್ರಭಾವಿತರಾಗಿದ್ದರು. ಜರ್ಮನ್ ಭಾಷೆಯಲ್ಲಿ ರೂಮಿಯ ತತ್ವಶಾಸ್ತ್ರವನ್ನು ವಿಶ್ವವಿದ್ಯಾಲಯಗಳಲ್ಲಿ ಕಲಿಸಲಾಗುತ್ತದೆ.

ಸ್ಪ್ಯಾನಿಷ್:ಸ್ಪೇನ್‌ನಲ್ಲಿ ರೂಮಿಯನ್ನು ಸೂಫಿ ಮತ್ತು ಕ್ರಿಶ್ಚಿಯನ್ ಮಿಸ್ಟಿಕ್ ಸಂತರಾದ ಸಂತ ಜಾನ್ ಆಫ್ ದಿ ಕ್ರಾಸ್ ಅವರ ಜೊತೆಗೆ ಓದಲಾಗುತ್ತದೆ.

ಚೈನೀಸ್ ಮತ್ತು ಜಪಾನೀಸ್:ಚೀನಾ ಮತ್ತು ಜಪಾನ್‌ನಲ್ಲಿ ರೂಮಿಯ ಕವಿತೆಗಳು ಝೆನ್ ಬೌದ್ಧಧರ್ಮದ ಚಿಂತನೆಯ ಜೊತೆಗೆ ಹೋಲಿಸಲ್ಪಡುತ್ತವೆ. ‘ನಾನು’ ಎಂಬ ಅಹಂಕಾರವನ್ನು ಬಿಡುವುದು — ಇದು ಝೆನ್‌ನಲ್ಲೂ, ರೂಮಿಯಲ್ಲೂ ಒಂದೇ ಸಂದೇಶ.ರಷ್ಯನ್, ಇಟಾಲಿಯನ್, ಡಚ್, ಸ್ವೀಡಿಷ್: ಯುರೋಪಿನ ಪ್ರತಿಯೊಂದು ಭಾಷೆಯಲ್ಲಿ ರೂಮಿಯ ಕವಿತೆಗಳು ಅನುವಾದಗೊಂಡಿವೆ. ಪ್ರತಿಯೊಂದು ಭಾಷೆಯಲ್ಲಿ ರೂಮಿ ಹೊಸದಾಗಿ ಹುಟ್ಟುತ್ತಾರೆ.

ಎಲ್ಲಾ ಭಾಷೆಗಳಲ್ಲಿ ಒಂದೇ ಸಂದೇಶ: ರೂಮಿಯ ಮೂರು ದೊಡ್ಡ ಸತ್ಯಗಳು
ರೂಮಿಯ ಸಾಹಿತ್ಯವನ್ನು ಯಾವ ಭಾಷೆಯಲ್ಲಿ ಓದಿದರೂ ಮೂರು ಸತ್ಯಗಳು ಒಂದೇ ರೀತಿ ಕಾಣಿಸುತ್ತವೆ:
1. ವಿರಹವೇ ಪ್ರೇಮದ ಆರಂಭ
ಕೊಳಲು ತನ್ನ ಮೂಲದಿಂದ ಬೇರ್ಪಟ್ಟಂತೆ, ಮನುಷ್ಯನ ಆತ್ಮವೂ ತನ್ನ ಮೂಲದಿಂದ ಬೇರ್ಪಟ್ಟಿದೆ. ಈ ವಿರಹವೇ ಹುಡುಕಾಟಕ್ಕೆ ಕಾರಣ. ವಿರಹವಿಲ್ಲದಿದ್ದರೆ ಪ್ರೇಮವಿಲ್ಲ.
2. ಅಹಂಕಾರವೇ ದೊಡ್ಡ ಗೋಡೆ
“ನಾನು” ಎಂದು ಹೇಳುವವರೆಗೆ ದೇವರ ಬಾಗಿಲು ತೆರೆಯುವುದಿಲ್ಲ. “ನೀನು” ಎಂದು ಹೇಳಿದಾಗಲೇ ಬಾಗಿಲು ತೆರೆಯುತ್ತದೆ. ಇದು ಎಲ್ಲಾ ಧರ್ಮಗಳಿಗೂ, ಎಲ್ಲಾ ಭಾಷೆಗಳಿಗೂ ಅನ್ವಯಿಸುವ ಸತ್ಯ.
3. ಪ್ರೇಮವೇ ಮಿಲನದ ದಾರಿ
ಜ್ಞಾನವು ದಾರಿ ತೋರಿಸಬಹುದು, ಆದರೆ ಪ್ರೇಮವೇ ನಡೆಸುತ್ತದೆ. ಪ್ರೇಮವು ಆಕಾಶಕ್ಕೆ ಹಾರುವ ಶಕ್ತಿ, ಪ್ರತಿ ಉಸಿರಿನಲ್ಲೂ ನೂರು ಪರದೆಗಳನ್ನು ಹರಿದುಹಾಕುವ ಶಕ್ತಿ.

ಗುಲ್ಬರ್ಗಾದಲ್ಲಿ ರೂಮಿ;
ಗುಲ್ಬರ್ಗಾದಲ್ಲಿ ರೂಮಿಯ ನೆನಪು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿಲ್ಲ. ಪರಂಪರಾಗತ ಖಾಝಿ ಮನೆತನದ ಡಾ. ಖಾಝಿ ಹಮಿದ್ ಫೈಸಲ್ ಸಿದ್ದೀಕಿ ರವರು ಪ್ರತಿವರ್ಷ ‘ಮೌಲಾನಾ ರೂಮಿ ಪ್ರಶಸ್ತಿ’ ಪ್ರದಾನ ಮಾಡುವ ಮೂಲಕ, ನಿಸ್ವಾರ್ಥವಾಗಿ ಸಮಾಜಸೇವೆ ಸಲ್ಲಿಸುವ ಎಲೆಮರೆಯ ಕಾಯಿಗಳಂತಹ ಸಾಧಕರನ್ನು ಗುರುತಿಸಿ ಗೌರವಿಸುತ್ತಿದ್ದಾರೆ. ಈ ಮೂಲಕ ರೂಮಿಯ ಪ್ರೇಮ, ಸೇವೆ ಮತ್ತು ಮಾನವೀಯತೆಯ ಸಂದೇಶವನ್ನು ಜೀವಂತವಾಗಿರಿಸಿದ್ದಾರೆ.

ಇಂದು ರೂಮಿ ಏಕೆ ಇನ್ನೂ ಜೀವಂತ?
ಇಂದು ಜಗತ್ತು ಧರ್ಮ, ಜಾತಿ, ದೇಶ, ಭಾಷೆಯ ಹೆಸರಿನಲ್ಲಿ ಒಡೆದುಹೋಗುತ್ತಿರುವಾಗ ರೂಮಿ ಇನ್ನೂ ಜೀವಂತವಾಗಿರುವುದಕ್ಕೆ ಕಾರಣ ಅವರು ಒಡೆದದ್ದನ್ನು ಜೋಡಿಸುತ್ತಾರೆ.

ಅವರು ಹೇಳುತ್ತಾರೆ:“ತಪ್ಪು ಮತ್ತು ಸರಿ ಎಂಬ ಕಲ್ಪನೆಗಳಾಚೆ ಒಂದು ಮೈದಾನವಿದೆ. ಅಲ್ಲಿ ನಾನು ನಿನ್ನನ್ನು ಭೇಟಿಯಾಗುತ್ತೇನೆ.” ಆ ಮೈದಾನಕ್ಕೆ ಭಾಷೆಯಿಲ್ಲ, ಧರ್ಮವಿಲ್ಲ, ಗಡಿಯಿಲ್ಲ. ಅಲ್ಲಿ ಮನುಷ್ಯ ಮಾತ್ರ ಇದ್ದಾನೆ, ಪ್ರೇಮ ಮಾತ್ರ ಇದೆ.

ಬಲ್ಖ್‌ನಿಂದ ಕೊನ್ಯಾವರೆಗೆ ನಡೆದ ರೂಮಿಯ ಪಯಣವು ಭೌಗೋಳಿಕ ಪಯಣವಾಗಿರಲಿಲ್ಲ. ಅದು ಜ್ಞಾನದಿಂದ ಅನುಭವದ ಕಡೆಗೆ, ಪುಸ್ತಕದಿಂದ ಹೃದಯದ ಕಡೆಗೆ, ವಿರಹದಿಂದ ಮಿಲನದ ಕಡೆಗೆ ನಡೆದ ಪಯಣ. ಇಂದು ಆ ಪಯಣವು ಪರ್ಷಿಯನ್‌ನಿಂದ ಅರೇಬಿಕ್‌ಗೆ, ಅರೇಬಿಕ್‌ನಿಂದ ಇಂಗ್ಲಿಷಿಗೆ, ಟರ್ಕಿಶ್‌ನಿಂದ ಉರ್ದುವಿಗೆ, ಉರ್ದುವಿನಿಂದ ಕನ್ನಡಕ್ಕೆ ಹೀಗೆ ಜಗತ್ತಿನ ಪ್ರತಿಯೊಂದು ಭಾಷೆಯಲ್ಲಿ ಮುಂದುವರಿಯುತ್ತಿದೆ. ಅದಕ್ಕಾಗಿಯೇ ರೂಮಿ ಕೇವಲ ಹದಿಮೂರನೇ ಶತಮಾನದ ಕವಿ ಅಲ್ಲ. ಅವರು ಪ್ರತಿಯೊಂದು ಭಾಷೆಯಲ್ಲಿ ಮತ್ತೆ ಮತ್ತೆ ಹುಟ್ಟುವ, ಪ್ರತಿಯೊಂದು ಹೃದಯದಲ್ಲಿ ಮತ್ತೆ ಮತ್ತೆ ಬದುಕುವ ಒಂದು ಧ್ವನಿ.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು