ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ಹಾಗೂ ಮೆಟ್ರಿಕ್ ನಂತರದ ಎಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಲು ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.
ಜಿ.ಪಂ. ಸಿಇಓ ಅವರು ಹೊರಡಿಸಿರುವ ಈ ಸುತ್ತೋಲೆಯ ಪ್ರಕಾರ, ವಿದ್ಯಾರ್ಥಿ ನಿಲಯಗಳಲ್ಲಿರುವ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಕಡ್ಡಾಯ. ಕ್ಯಾಮೆರಾ ಕೆಟ್ಟು ಹೋದರೆ ತಕ್ಷಣ ದುರಸ್ತಿ ಮಾಡಿಸಬೇಕು. ತಿಂಗಳಿಗೊಮ್ಮೆ ವೀಡಿಯೋ ದೃಶ್ಯಗಳನ್ನು ಸಿಡಿ ಅಥವಾ ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿಡಬೇಕು.
ಪ್ರಮುಖ ಅಂಶಗಳು:
- ವಿದ್ಯಾರ್ಥಿಗಳು ನಿಲಯದ ಹೊರಗೆ ಹೋಗುವಾಗ ಮತ್ತು ಒಳಗೆ ಬರುವಾಗ ಹೆಸರು, ಸಮಯ, ಸ್ಥಳ, ದಿನಾಂಕ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
- ವಿದ್ಯಾರ್ಥಿನಿಯರು ರಜೆ ಮೇಲೆ ತೆರಳಿದಾಗ, ಪೋಷಕರಿಗೆ ವಿಡಿಯೋ ಕರೆ ಮಾಡಿ ಸುರಕ್ಷಿತವಾಗಿ ಮನೆ ತಲುಪಿದ ಕುರಿತು ಖಚಿತಪಡಿಸಿಕೊಳ್ಳಬೇಕು.
- ಬಾಲಕಿಯರ ನಿಲಯಗಳ ಹತ್ತಿರ ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು.
- ಅನುಮಾನಾಸ್ಪದ ವ್ಯಕ್ತಿಗಳು ನಿಲಯದ 1 ಕಿಮೀ ವ್ಯಾಪ್ತಿಯಲ್ಲಿ ಕಂಡುಬಂದರೆ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
- ನಿಲಯ ಸಿಬ್ಬಂದಿ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಹಾಜರಿದ್ದು ವಿದ್ಯಾರ್ಥಿಗಳ ಚಲನವಲನಗಳ ಮೇಲೆ ನಿಗಾ ಇರಿಸಬೇಕು.
- ರಾತ್ರಿ ಕಾವಲುಗಾರರು ಸಂಜೆ 5ರಿಂದ ಬೆಳಿಗ್ಗೆ 7ರವರೆಗೆ ಕರ್ತವ್ಯ ನಿರ್ವಹಿಸಬೇಕು.
- ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯನ್ನು ನಿರ್ಬಂಧಿಸಲು ಸೂಚನೆ ನೀಡಬೇಕು.
- ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಲೈಂಗಿಕ ದೌರ್ಜನ್ಯ ತಡೆ ಮತ್ತು ಮಾನಸಿಕ ಆರೋಗ್ಯ ಕುರಿತು ಕಾರ್ಯಾಗಾರ ಆಯೋಜಿಸಬೇಕು.
- ಒತ್ತಡ ಅಥವಾ ಖಿನ್ನತೆ ಅನುಭವಿಸುವ ವಿದ್ಯಾರ್ಥಿಗಳಿಗೆ ನುರಿತ ಸಮಾಲೋಚಕರಿಂದ ಚಿಕಿತ್ಸೆ ಒದಗಿಸಬೇಕು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಈ ನಿಯಮಗಳನ್ನು ನಿಲಯ ಮೇಲ್ವಿಚಾರಕರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸ್ಪಷ್ಟ ಸೂಚನೆ ನೀಡಿದ್ದಾರೆ.