ದಕ್ಷಿಣ ಕನ್ನಡ | ಕೋಲ್ಡ್ ಪ್ರೆಸ್ಡ್ ಹೆಸರಿನಲ್ಲಿ ಕಚ್ಚಾ ಎಣ್ಣೆ ಮಾರಾಟ: 1,240 ಕೆ.ಜಿ. ಅಡುಗೆ ಎಣ್ಣೆ ವಶಕ್ಕೆ ಪಡೆದ ಆಹಾರ ಸುರಕ್ಷತಾ ಇಲಾಖೆ
ಲಿಂಕ್ ನಕಲಿಸಲಾಗಿದೆ ✓
ಮಂಗಳೂರು: ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ತಪ್ಪು ಲೇಬಲಿಂಗ್ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬೋಳಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ನಿಂದ 1,240 ಕೆ.ಜಿ. ಅಡುಗೆ ಎಣ್ಣೆಯನ್ನು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಶಪಡಿಸಿಕೊಂಡ ದಾಸ್ತಾನಿನಲ್ಲಿ ಶೇಂಗಾ ಎಣ್ಣೆ ಮತ್ತು ತೆಂಗಿನ ಎಣ್ಣೆ ಸೇರಿವೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಖರೀದಿಸಲಾಗಿದ್ದ ಕಚ್ಚಾ ಶೇಂಗಾ ಎಣ್ಣೆಯನ್ನು ರೀಪ್ಯಾಕ್ ಮಾಡಿ, ‘ಕೋಲ್ಡ್ ಪ್ರೆಸ್ಡ್ ಶೇಂಗಾ ಎಣ್ಣೆ’ ಎಂದು ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಚ್ಚಾ ಶೇಂಗಾ ಎಣ್ಣೆಯನ್ನು ಕೋಲ್ಡ್ ಪ್ರೆಸ್ಡ್ ಎಣ್ಣೆ ಎಂದು ಲೇಬಲ್ ಮಾಡಿ ಮಾರಾಟ ಮಾಡಿರುವುದು ಗ್ರಾಹಕರನ್ನು ತಪ್ಪುದಾರಿಗೆ ಎಳೆಯುವ ಕ್ರಮವಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ಪನ್ನಗಳ ಲೇಬಲಿಂಗ್ ಮತ್ತು ಮಾರುಕಟ್ಟೆ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯ ಕುರಿತು ಪರಿಶೀಲನೆ ನಡೆಸಲಾಗಿದೆ.
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಸಂಸ್ಥೆಯ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ಪರಿಶೀಲನೆಯ ವೇಳೆ ಒಟ್ಟು 1,240 ಕೆ.ಜಿ. ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ.
ಮಾಮೂಲಿ ಎಣ್ಣೆಗೆ ಹೋಲಿಸಿದರೆ ಕೋಲ್ಡ್ ಪ್ರೆಸ್ ಎಂದು ಮಾರಲಾಗುವ ಎಣ್ಣೆಗೆ ವಿಪರೀತ ದರವಿದ್ದು, ಈ ಘಟನೆಯಿಂದ ಗ್ರಾಹಕರು ಈಗ ಕೋಲ್ಡ್ ಪ್ರೆಸ್ಡ್/ಗಾಣದ ಎಣ್ಣೆ ಹೆಸರಿನಲ್ಲಿ ಮಾರಲ್ಪಡುವ ಎಣ್ಣೆಗಳನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಉಂಟಾಗಿದೆ.
ಇದನ್ನೂ ಓದಿ:
Peepal Media
Peepal Media · ರಾಜ್ಯ ವಿಭಾಗ