ಬಸವಣ್ಣನವರಿಗೆ ಅವಮಾನ ಮಾಡಿದರೇನಂತೆ; ಸೂರ್ಯನತ್ತ ಮುಖಮಾಡಿ ಉಗಿದಂತೆ
ಲಿಂಕ್ ನಕಲಿಸಲಾಗಿದೆ ✓
“..12 ನೇ ಶತಮಾನದ ಕಲ್ಯಾಣದ ಬಸವ ಕಾಲದಿಂದ ಇಂದಿನವರೆಗೂ ಈ ಪುರೋಹಿತಶಾಹಿ ಮನಸ್ಥಿತಿಯ ಮತಿಹೀನರು ಬಸವಣ್ಣನವರನ್ನು ಹಾಗೂ ಅವರು ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಹೀಯಾಳಿಸುತ್ತಾ, ಅಪಮಾನಿಸುತ್ತಾ ಬಂದಿದ್ದಾರೆ. ಇದು ಅದರ ಮುಂದುವರಿದ ಭಾಗ..” ಚಿಂತಕರಾದ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ
“ಬಸವಣ್ಣನವರು ಕಳಬೇಡ ಕೊಲಬೇಡ ಎನ್ನುವ ವಚನ ಬರೆದಿದ್ದಾರೆ. ಆದರೆ ಅವರೇ ಬಿಜ್ಜಳನ ಬಂಡಾರದಿಂದ ಕದ್ದು ಶರಣರಿಗೆ ಹಂಚಿ ಕಳ್ಳತನ ಮಾಡಿದ್ದಾರೆ, ಬಿಜ್ಜಳನನ್ನು ಹತ್ಯೆ ಮಾಡಿಸಿ ಕೊಲೆಗಾರರೂ ಆಗಿದ್ದಾರೆ.. ಲಿಂಗಾಯತರು ಲಿಂಗ ಹತರಾಗಿದ್ದಾರೆ” ಎಂದು ವಿಕ್ಷಿಪ್ತ ಮನಸ್ಥಿತಿಯ ವಿಕೃತ ವ್ಯಕ್ತಿಯೊಬ್ಬ ಲೇಖನ ಬರೆದರೆ ಲಿಂಗಾಯತ ಸಮುದಾಯದವರು ಸುಮ್ಮನಿರಲು ಸಾಧ್ಯವೇ?
ಸಮಾನತೆ, ಸಾಮಾಜಿಕ ನ್ಯಾಯವನ್ನು ಅನುಷ್ಠಾನಕ್ಕೆ ತಂದು, ಕಾಯಕ ದಾಸೋಹ ಸಿದ್ದಾಂತವನ್ನು ಪ್ರತಿಪಾದಿಸಿ,ವರ್ಣಬೇಧ- ವರ್ಗಬೇಧವನ್ನು ವಿರೋಧಿಸಿದ ಮಹಾನ್ ಸಮಾಜ ಸುಧಾರಕ ಬಸವಣ್ಣನವರನ್ನು ಅಪಮಾನಿಸುವಂತಹ ದ್ವೇಷವನ್ನು ಕಾರಿಕೊಂಡ ಅಧಮನನ್ನು ನಿರ್ಲಜ್ಜ ಎಂದು ನಿರ್ಲಕ್ಷಿಸಲು ಆಗುತ್ತದೆಯೇ?
12 ನೇ ಶತಮಾನದ ಕಲ್ಯಾಣದ ಬಸವ ಕಾಲದಿಂದ ಇಂದಿನವರೆಗೂ ಈ ಪುರೋಹಿತಶಾಹಿ ಮನಸ್ಥಿತಿಯ ಮತಿಹೀನರು ಬಸವಣ್ಣನವರನ್ನು ಹಾಗೂ ಅವರು ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಹೀಯಾಳಿಸುತ್ತಾ, ಅಪಮಾನಿಸುತ್ತಾ, ಹಲ್ಲೆ ಮಾಡುತ್ತಾ, ಅಪಪ್ರಚಾರ ಕೈಗೊಳ್ಳುತ್ತಲೇ ಬಂದಿದ್ದಾರೆ. ಯಾಕೆಂದರೆ ಸ್ಥಾಪಿತ ಸನಾತನ ಶೋಷಕ ಹಿತಾಸಕ್ತಿಯ ವಿರುದ್ದ ಬಸವಾದಿ ಶರಣರು ಸಾಮಾಜಿಕ ಅರಿವನ್ನು ಮೂಡಿಸಿದ್ದರು. ಸಮಾಜದ ತಳ ಕೆಳ ವರ್ಗದ ದುಡಿಯುವ ಜನರಿಗೆ ಅಕ್ಷರ ಜ್ಞಾನ ಕೊಟ್ಟು ವಚನ ಚಳುವಳಿಯನ್ನು ಕಟ್ಟಿದರು. ಅನುಭವ ಮಂಟಪದ ಮೂಲಕ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿದರು. ರೂಢಿಗತ ವೈದಿಕಶಾಹಿ ಗುಡಿ ಸಂಸ್ಕೃತಿಯನ್ನು ಪ್ರಶ್ನಿಸಿದರು, ಭಗವಂತ ಮತ್ತು ಭಕ್ತನ ನಡುವೆ ಮಧ್ಯವರ್ತಿಗಳಾಗಿದ್ದ ಪುರೋಹಿತರನ್ನು ಕಡೆಗಣಿಸಿ ಇಷ್ಟಲಿಂಗ ಪರಿಕಲ್ಪನೆಯನ್ನು ಬೋಧಿಸಿದರು. ಜಾತಿ ಬೇಧವನ್ನು ವಿರೋಧಿಸಿ ಅಂತರ್ಜಾತಿ ವಿವಾಹವನ್ನು ಬೆಂಬಲಿಸಿದರು. ಇಂತಹ ಕ್ರಾಂತಿಕಾರಿ ಬದಲಾವಣೆಗಳನ್ನು ಸಹಿಸದ ಪುರೋಹಿತಶಾಹಿ ಬ್ರಾಹ್ಮಣ ವರ್ಗದವರು ಬಸವಣ್ಣನವರನ್ನು ವಿರೋಧಿಸುತ್ತಲೇ ಬಂದರು. ಅಂದು ಆರಂಭವಾದ ಈ ಬಸವ ವಿರೋಧಿ, ಲಿಂಗಾಯತ ವಿರೋಧಿ ಶಡ್ಯಂತ್ರಗಳು ಇಂದಿಗೂ ಮುಂದುವರೆದಿವೆ. ಬೇರೆ ಬೇರೆ ರೂಪ ಕುರೂಪಗಳಲ್ಲಿ ನಿರಂತರವಾಗಿ ಅಪಚಾರ ಹಾಗೂ ಅಪಪ್ರಚಾರಗಳನ್ನು ಮಾಡುತ್ತಲೇ ಬರಲಾಗಿದೆ.
ಮೊದಲು ಪುರೋಹಿತಶಾಹಿಗಳೇ ನೇರವಾಗಿ ಬಸವಾದಿ ಶರಣರ ಕುರಿತು ಅಪಸ್ವರ ಎತ್ತುತ್ತಿದ್ದರು. ಆದರೆ ಯಾವಾಗ ಬಸವಾನುಯಾಯಿ ಲಿಂಗಾಯತ ಸಮುದಾಯದವರು ಅರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಬಲರಾಗುತ್ತಾ ಬಂದರೋ, ಯಾವಾಗ ಪುರೋಹಿತಶಾಹಿ ಹುನ್ನಾರಗಳಿಗೆ ತೀವ್ರ ಪ್ರತಿರೋಧ ಒಡ್ಡತೊಡಗಿದರೋ ಆಗ ಈ ಬ್ರಾಹ್ಮಣ್ಯವ್ಯಾದಿಗಳು ತಮ್ಮ ತಂತ್ರಗಾರಿಕೆಯನ್ನು ಬದಲಾಯಿಸಿಕೊಂಡರು. ವೀರಶೈವರನ್ನು ಲಿಂಗಾಯತರ ಮೇಲೆ ಎತ್ತಿ ಕಟ್ಟಿ ಲಿಂಗಾಯತ ಪ್ರತ್ಯೇಕ ಧರ್ಮ ಆಗದಂತೆ ನೋಡಿಕೊಂಡರು. ಕನ್ನೇರಿ ಸ್ವಾಮಿಯಂತಹ ಲಿಂಗಾಯತ ಮಠದ ಮತಿಗೆಟ್ಟ ಸ್ವಾಮಿಯನ್ನು ಲಿಂಗಾಯತರ ವಿರುದ್ದ ಚೂ ಬಿಟ್ಟು ಹಿಂದೂ ಲಿಂಗಾಯತ ಸಮ್ಮೇಳನಗಳನ್ನು ಮಾಡಿಸಿದರು. ಇದಕ್ಕೆ ಆರೆಸ್ಸೆಸ್ ಸಂಘ ಪರಿವಾರ ಬೆಂಬಲಿಸಿತು.
ಇಷ್ಟಕ್ಕೆ ತೃಪ್ತರಾಗದ ಬಸವ ವಿರೋಧಿ ವೈದಿಕಶಾಹಿ ಸನಾತನಿಗಳು ಲಿಂಗಾಯತ ಸಮುದಾಯದಲ್ಲೇ ಲಿಂಗಿ ಬ್ರಾಹ್ಮಣರನ್ನು ಹುಟ್ಟು ಹಾಕಿ ಲಿಂಗಾಯತರನ್ನು ನಿಂದಿಸಲು ಪ್ರಚೋದಿಸತೊಡಗಿದರು. ಬಸವಣ್ಣನವರನ್ನು, ಅವರು ಸ್ಥಾಪಿಸಿದ ಲಿಂಗಾಯತ ಧರ್ಮವನ್ನು, ಬಸವಾದಿ ಶರಣರ ವಚನಗಳನ್ನು ವಿರೋಧಿಸುವಂತಹ, ಲಿಂಗಾಯತಕ್ಕೆ ಹಿಂದುತ್ವವನ್ನು ಕಸಿ ಮಾಡುವಂತಹ, ವಚನ ಚಳುವಳಿಯ ಆಶಯಗಳಿಗೆ ದಕ್ಕೆ ತರುವಂತಹ, ಸಂಶೊಧನೆಯ ಹೆಸರಲ್ಲಿ ಬಸವ ತತ್ವಕ್ಕೆ ಅಪಚಾರ ಮಾಡುವಂತಹ ಲೇಖನಗಳನ್ನು ಬರೆಯುವ ಹಾಗೂ ಬರೆಸುವಂತಹ ನೀಚತನವನ್ನು ಈ ಬ್ರಾಹ್ಮಣರು ಆರಂಭಿಸಿದರು. ಹಾಗೂ ಲಿಂಗಿ ಬ್ರಾಹ್ಮಣರಿಗೆ ಬಸವ ವಿರೋಧಿ ಲೇಖನಗಳನ್ನು, ಪುಸ್ತಕಗಳನ್ನು ಬರೆಯುವಂತೆ ಪ್ರಚೋದಿಸತೊಡಗಿದರು.
ಹೀಗಾಗಿಯೇ “ಬಸವಶೈಲದಲ್ಲಿ ಹಿಂದುತ್ವ” “ವಚನ ದೀಪ್ತಿ”ಯಂತಹ ಪುಸ್ತಕಗಳು ಪ್ರಕಟಗೊಂಡು ವಿವಾದವನ್ನು ಸೃಷ್ಟಿಸಿವೆ. ಈಗ ಬಸವ ವಿರೋಧಿ ಲೇಖನಗಳನ್ನು ಬರೆಯುತ್ತಾ, ಲಿಂಗಾಯತ ಧರ್ಮದ ಪರವಾಗಿ ಇರುವ ದಿವಂಗತ ಪ್ರೊ. ಎಂ.ಎಂ.ಕಲಬುರ್ಗಿಯವರಿಂದಾ ಹಿಡಿದು ಲಿಂಗಾಯತ ಮಹಾಸಭಾದ ಜಮಾದಾರ್ ರವರ ವರೆಗೆ ಅಪ್ಪಟ ಬಸವಾಭಿಮಾನಿಗಳನ್ನೆಲ್ಲಾ ನಿಂದಿಸಿ ಲೇಖನಗಳನ್ನು ಬರೆಯುತ್ತಾ, ಲಿಂಗಾಯತರನ್ನು ಲಿಂಗ ಹತರು ಎಂದು ನಿಂದಿಸುತ್ತಾ ಬಂದಿರುವ ರವಿ ಹಂಜ್ ಎನ್ನುವ ಸ್ವಘೋಷಿತ ಸಂಶೋಧಕ ಲಿಂಗಿ ಬ್ರಾಹ್ಮಣ ಬರೆದ “ಬಸವ ಮಂಟಪ” ಎನ್ನುವ ಬಸವ ವಿರೋಧಿ ಲೇಖನಗಳ ಸಂಗ್ರಹದ ಪುಸ್ತಕ ತೀವ್ರತರದ ವಿವಾದವನ್ನು ಹಾಗೂ ಲಿಂಗಾಯತ ಸಮುದಾಯದವರಲ್ಲಿ ಆಕ್ರೋಶವನ್ನೂ ಹುಟ್ಟುಹಾಕಿದೆ. ದಾವಣಗೆರೆ ಮೂಲದ ಅಮೇರಿಕ ವಾಸಿಯಾದ ಈ ಬಸವದ್ರೋಹಿ ರವಿ ಹಂಜ್ ಎನ್ನುವವನನ್ನು ಹೀಗೆಲ್ಲಾ ಲಿಂಗಾಯತ ವಿರೋಧಿ ಲೇಖನಗಳನ್ನು ಬರೆಯಲು ಪ್ರಚೋದಿಸಿದ್ದು ವಿಷಭಟ್ಟನೆಂಬ ಕುಖ್ಯಾತಿಯ ವಿಶ್ವೇಶ್ವರ ಭಟ್ಟ ಎನ್ನುವ ಬ್ರಾಹ್ಮಣ್ಯವ್ಯಾಧಿ ಪತ್ರಕರ್ತ. ಈತ ತನ್ನ ‘ವಿಶ್ವವಾಣಿ’ ಎನ್ನುವ ಪೀತಪತ್ರಿಕೆಯಲ್ಲಿ ಈ ಹಂಜ್ ನ ವಿಕೃತ ಲೇಖನಗಳನ್ನು ಪ್ರಕಟಿಸುತ್ತಲೇ ಬಂದ. ಈ ಹಂಜ್ ಬರೆದ ಲಿಂಗಾಯತ ವಿರೋಧಿ ಲೇಖನಗಳ ಸಂಖ್ಯೆ ಹೆಚ್ಚಾದಾಗ “ಬಸವ ಮಂಟಪ” ಎನ್ನುವ ಹೆಸರಲ್ಲಿ ತಾನೇ ಹಣ ಹಾಕಿ ಪ್ರಕಟಿಸಿದ. ಈ ವಿಷಮಯ ವಿಶ್ವವಾಣಿ ಪತ್ರಿಕೆಯನ್ನು ಕೆಲವೇ ಕೆಲವು ಸಂಘಿ ಸಂತಾನಗಳನ್ನು ಹೊರತು ಪಡಿಸಿ ಯಾವ ಲಿಂಗಾಯತರೂ ಓದದೇ ಇರುವುದರಿಂದ ಪ್ರತಿರೋಧ ಬಂದಿರಲಿಲ್ಲ. ಯಾವಾಗ ಈ ಲಿಂಗಾಯತ ವಿರೋಧಿ ಲೇಖನಗಳನ್ನೆಲ್ಲಾ ಸೇರಿಸಿ “ಬಸವ ಮಂಟಪ” ಎನ್ನುವ ಹೆಸರಲ್ಲಿ 600 ಪುಟಗಳ ಪುಸ್ತಕ ರೂಪದಲ್ಲಿ ಪ್ರಕಟಿಸಿದ ವಿಶ್ವೇಶ್ವರ ಭಟ್ಟರು ನವೆಂಬರ್ 15 ರಂದು ಲೋಕಾರ್ಪಣೆ ಮಾಡಿ ಪ್ರಚಾರ ಕೊಟ್ಟರೋ ಆಗ ಲಿಂಗಾಯತ ಸಮುದಾಯ ತಿರುಗಿ ಬಿದ್ದಿತು.

ಯಾವಾಗ ಲಿಂಗಾಯತ ವಿರೋಧಿ ಮಾತುಗಳನ್ನು ರವಿ ಹಂಜ್ ಮೂಲಕ ಹೇಳಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ತೇಲಿ ಬಿಡಲಾಯಿತೋ ಆಗ ವಿವಾದ ಬುಗಿಲೆದ್ದಿತು. ಪಕ್ಷಾತೀತವಾಗಿ ಎಲ್ಲಾ ವೀರಶೈವ ಲಿಂಗಾಯತ ರಾಜಕಾರಣಿಗಳೂ ಈ ದ್ವೇಷಪೂರಿತ ಪುಸ್ತಕದ ವಿರುದ್ದ ಕಿಡಿಕಾರಿದರು. ಪುಸ್ತಕವನ್ನು ನಿಷೇಧಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಸಮುದಾಯದ ಸಚಿವರು ಮುಖ್ಯಮಂತ್ರಿಗೆ ಪತ್ರ ಬರೆದರು. ಬಸವಾನುಯಾಯಿಗಳ ಆಕ್ರೋಶ ಹೆಚ್ಚಾಯಿತು. ಈ ಪುಸ್ತಕವನ್ನು ಬೀದಿಯಲ್ಲಿ ಸುಡಲಾಯಿತು. ಪುಸ್ತಕ ಬರೆದವನ ಪ್ರತಿಕೃತಿಯನ್ನು ದಹಿಸಲಾಯ್ತು. ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ವಿರುದ್ದ ರಾಜ್ಯದ ಹಲವಾರು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾದವು. ದ್ವೇಷ ಭಾಷಣ, ಸಾರ್ವಜನಿಕ ಶಾಂತಿ ಭಂಗ ಹಾಗೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ಎನ್ನುವ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐ ಆರ್ ಗಳನ್ನು ದಾಖಲಿಸಲಾಯ್ತು. ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಸವ ವಿರೋಧಿ ಪುಸ್ತಕವನ್ನು ಮುಟ್ಟುಗೋಲು ಹಾಕಲು ನಿರ್ಧರಿಸಲಾಯ್ತು. ಬಸವಣ್ಣನವರಿಗೆ ಕಳ್ಳ, ಕೊಲೆಗಾರ ಎಂದು ಆರೋಪಿಸಲಾದ ಈ ಪುಸ್ತಕದ ಕರ್ತೃ ರವಿ ಹಂಜ್ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ಟನ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನು ಕ್ರಮ ಕೈಗೊಳ್ಳಲೂ ಸಭೆಯಲ್ಲಿ ನಿರ್ಣಯಿಸಲಾಯ್ತು.

ಇಷ್ಟಾದರೂ ಸಹ ತನ್ನ ದುರಹಂಕಾರ ಬಿಡದ ರವಿ ಹಂಜ್, ವಿಸ್ತಾರ ಸುದ್ದಿ ಮಾಧ್ಯಮದ ಚರ್ಚೆಯಲ್ಲಿ ಪೋನ್ ಮೂಲಕ ಭಾಗವಹಿಸಿ ತನ್ನ ಕುಕೃತ್ಯವನ್ನು ಸಮರ್ಥಿಸಿಕೊಂಡಿದ್ದು ಅಕ್ಷಮ್ಯ. ತಾನು ಬರೆದ ಪ್ರತಿ ಸಾಲಿಗೂ ಪುರಾವೆಗಳಿವೆ ಎನ್ನುತ್ತಾ ಬಸವ ಪುರಾಣದಂತಹ ಕಾಲ್ಪನಿಕ ಗ್ರಂಥಗಳೇ ಆಧಾರ ಎನ್ನುವ ಈ ರವಿ ಹಂಜ್ ತನ್ನ ಬಸವದ್ರೋಹಿ ದುಷ್ಕೃತ್ಯವನ್ನು ಸಮರ್ಥಿಸಿಕೊಂಡನು. ‘ಈ ಪುರಾಣ ಪರಿಕಲ್ಪನೆಗಳು ಎಂದೂ ಐತಿಹಾಸಿಕ ಸತ್ಯಗಳಾಗಲು ಸಾಧ್ಯವಿಲ್ಲ’ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದ ಈ ನಕಲಿ ಸಂಶೋದಕನಿಗೆ ಲಿಂಗಾಯತರನ್ನು ನಿಂದಿಸಿ, ಬಸವಣ್ಣನವರನ್ನು ಅವಮಾನಿಸಿ ಪ್ರಚಾರ ಗಿಟ್ಟಿಸುವ ಹಪಾಹಪಿ. ಇಂತಹ ಹಪಾಹಪಿ ಇರುವವರನ್ನು ಪ್ರಚೋದಿಸಿ ತನ್ನ ಬ್ರಾಹ್ಮಣ್ಯದ ಡಿ ಎನ್ ಎ ದಲ್ಲಿ ಹಾಸುಹೊಕ್ಕಾಗಿರುವ ಬಸವ ವಿರೋಧಿತನವನ್ನು ಲಿಂಗಿ ಬ್ರಾಹ್ಮಣನ ಮೂಲಕ ಸಾಧಿಸಿದ ಸಂತೃಪ್ತಿ ಈ ವಿಷಭಟ್ಟನೆಂಬ ಬ್ರಾಹ್ಮಣನದ್ದು. ಆದರೆ ಈ ಇಬ್ಬರೂ ಲಿಂಗಾಯತ ವಿರೋಧಿಗಳು ಈಗ ಬಸವಾನುಯಾಯಿಗಳ ಆಕ್ರೋಶಕ್ಕೆ ಗುರಿಯಾಗಿದ್ದು, ತಮ್ಮ ಉದ್ದೇಶದಲ್ಲಿ ವಿಫಲರಾಗಿದ್ದಾರೆ. ಬಸವಣ್ಣನವರಂತಹ ಮಹಾನ್ ಮಾನವತಾವಾದಿಯನ್ನು ಅವಮಾನಿಸಲು ಪ್ರಯತ್ನಿಸಿ ಇಡೀ ವೀರಶೈವ ಲಿಂಗಾಯತ ಸಮುದಾಯದ ತೀವ್ರ ಪ್ರತಿರೋಧವನ್ನು ಎದುರಿಸುತ್ತಿದ್ದಾರೆ.
ಯಾವುದೇ ಪುಸ್ತಕವನ್ನು ಸುಡುವುದಾಗಲೀ ಇಲ್ಲವೇ ನಿಷೇಧಿಸುವುದಾಗಲೀ ಸಮರ್ಥನೀಯವಲ್ಲ. ಅವುಗಳನ್ನು ವೈಚಾರಿಕ ವಾದದಿಂದ ಹಾಗೂ ಅಹಿಂಸಾತ್ಮಕ ಸಾತ್ವಿಕ ಸಿಟ್ಟಿನಿಂದ ವಿರೋಧಿಸುವುದರಲ್ಲಿ ತಪ್ಪಿಲ್ಲ. ಆದರೆ ಇತಿಹಾಸವನ್ನು ತಿರುಚಿ ಒಬ್ಬ ನಿಜವಾದ ವಿಶ್ವಗುರುವನ್ನು ದುರುದ್ದೇಶಪೂರ್ವಕವಾಗಿ ಅವಮಾನಿಸಿದಾಗ, ಲಿಂಗಾಯತ ಸಮುದಾಯದ ನಾಯಕರನ್ನು ಲಿಂಗ ಹತರು ಎಂದು ನಿಂದಿಸಿದಾಗ ಮೌನವಾಗಿರಲೂ ಸಾಧ್ಯವಿಲ್ಲ. ಸುಮ್ಮನಿದ್ದರೆ ಈ ಬ್ರಾಹ್ಮಣ್ಯವ್ಯಾದಿಗಳು ಹಾಗೂ ಲಿಂಗಿ ಬ್ರಾಹ್ಮಣರು ಸೇರಿ ಬಸವಾದಿ ಶರಣರ ಬಗ್ಗೆ, ವಚನ ಚಳುವಳಿಯ ಬಗ್ಗೆ, ಲಿಂಗಾಯತ ಸಮುದಾಯದ ಬಗ್ಗೆ ನಕಾರಾತ್ಮಕ ಸಂಕಥನಗಳನ್ನು ಸೃಷ್ಟಿಸಿ ಅಕ್ಷರ ರೂಪದಲ್ಲಿ ದಾಖಲಿಸುತ್ತಾರೆ. ಮುಂದಿನ ತಲೆಮಾರು ಈ ಸುಳ್ಳು ನರೇಶನ್ ಗಳನ್ನೇ ಸತ್ಯವೆಂದು ನಂಬುವ ಅಪಾಯವೂ ಇದೆ. ಪುರಾಣಗಳನ್ನು ನಿಜವೆಂದು ನಂಬಿ ಬಸವಣ್ಣನವರನ್ನೇ ಕಳ್ಳ, ಕೊಲೆಗಾರ ಎಂಬಂತೆ ಈ ರವಿ ಹಂಜ್ ನಂತವರು ಪುಸ್ತಕ ರೂಪದಲ್ಲಿ ದಾಖಲಿಸಿದಂತೆ, ಇಂತಹ ವಿಕೃತ ಪುಸ್ತಕಗಳನ್ನೇ ನಿಜವಾದ ಆಕರಗಳು ಎಂದು ನಂಬುವ ಮುಂದಿನ ಜನಾಂಗದ ಬಸವದ್ರೋಹಿಗಳು, ಪೋಷಕ ವಿರೋಧಿ ವಚನ ಚಳುವಳಿಯನ್ನೇ ಅಪವ್ಯಾಖ್ಯಾನ ಮಾಡಿ ಪ್ರಚಾರ ಮಾಡುವ ಸಂಭವನೀಯತೆಯನ್ನು ಅಲ್ಲಗಳೆಯಲಾಗದು.

ಹೀಗಾಗಿ ಇಂತಹ ನೀಚತನದ ವಿವಾದಾತ್ಮಕ ಪುಸ್ತಕಗಳನ್ನು ಸಮಾಜದಿಂದ ಭಹಿಷ್ಕರಿಸುವುದೇ ಉತ್ತಮ. ಇಂತಹ ಬಸವ ವಿರೋಧಿ ನೀಚರನ್ನು ಕಾನೂನಾತ್ಮಕವಾಗಿ ವಿಚಾರಣೆಗೆ ಅಳವಡಿಸಿ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದೇ ಆದ್ಯತೆ. ಯಾಕೆಂದರೆ ಬಸವಣ್ಣನವರಂತ ಅಪ್ರತಿಮ ಸಮಾಜ ಸುಧಾರಕರನ್ನು ಅವಮಾನಿಸುವಂತಹ ದುಸ್ಸಾಹಸವನ್ನು ಮಾಡುವ ಬ್ರಾಹ್ಮಣ್ಯವ್ಯಾಧಿಗಳು ಹಾಗೂ ಲಿಂಗಿ ಬ್ರಾಹ್ಮಣರಿಗೆ ಈ ಪ್ರಕರಣ ಎಚ್ಚರಿಕೆಯ ಗಂಟೆಯಾಗಬೇಕಿದೆ. ‘ಬಸವಾದಿ ಶರಣರಿಗೆ ಅಪಮಾನ ಮಾಡಿದವರನ್ನು ಎಚ್ಚೆತ್ತ ಲಿಂಗಾಯತ ಸಮಾಜ ಎಂದೂ ಸಹಿಸುವುದಿಲ್ಲ’ ಎಂಬ ಸಂದೇಶವನ್ನು ಬಸವದ್ರೋಹಿಗಳಿಗೆ ಮನದಟ್ಟು ಮಾಡಬೇಕಾಗಿದೆ. ಬಸವಣ್ಣನವರು ಕಟ್ಟಿ ಬೆಳೆಸಿದ, ಶೋಷಕ ವರ್ಗದ ವಿರುದ್ಧದ ಸಮಾನತೆ ಸಾರುವ ಲಿಂಗಾಯತ ಧರ್ಮ ಬಸವ ತತ್ವದ ಆಧಾರದಲ್ಲಿ ಮುಂದುವರೆಯಬೇಕಿದೆ. ಸನಾತನವಾದಿ ವೀರಶೈವ ಜಂಗಮರ ಹಿಡಿತದಿಂದ ಬಿಡಿಸಿಕೊಂಡು ದಯೆ ಇರುವ ಸ್ವತಂತ್ರ ಧರ್ಮವಾಗಿ ಅಸ್ತಿತ್ವವನ್ನು ಪಡೆಯಬೇಕಿದೆ. ಕನ್ನಡ ನಾಡಿನಲ್ಲಿ ಹುಟ್ಟಿದ ಸರ್ವ ಸಮಾನತೆಯ ಲಿಂಗಾಯತ ಧರ್ಮ ವಿಶ್ವಕ್ಕೆ ಮಾದರಿಯಾಗಬೇಕಿದೆ.
Peepal Media Desk
Peepal Media · ಅಂಕಣ ವಿಭಾಗ