KSRTC ಪುರುಷ ನೌಕರರಿಗೆ ಗುಡ್ನ್ಯೂಸ್: ಪತ್ನಿಯ ಹೆರಿಗೆ ಸಂದರ್ಭದಲ್ಲಿ 15 ದಿನಗಳ ಪಿತೃತ್ವ ರಜೆ ಮಂಜೂರು
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಪುರುಷ ನೌಕರರಿಗೆ ಪಿತೃತ್ವ ರಜೆ ಸೌಲಭ್ಯ ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇನ್ಮುಂದೆ ನಿಗಮದ ಅರ್ಹ ಪುರುಷ ನೌಕರರು ತಮ್ಮ ಪತ್ನಿಯ ಹೆರಿಗೆಯ ಸಂದರ್ಭದಲ್ಲಿ 15 ದಿನಗಳ ಕಾಲ ವೇತನ ಸಹಿತ ಪಿತೃತ್ವ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ನೌಕರರ ಬಹುಕಾಲದ ಬೇಡಿಕೆಗೆ ಸ್ಪಂದಿಸಿರುವ ನಿಗಮವು ಈ ಸೌಲಭ್ಯವನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಈ ಕುರಿತು ನವೆಂಬರ್ 24ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಕೆ.ಬಿ. ಅವರು ಸುತ್ತೋಲೆ ಹೊರಡಿಸಿದ್ದು, ಆದೇಶ ತಕ್ಷಣದಿಂದಲೇ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ರಜಾ ನಿಯಮಗಳಲ್ಲಿ ಹೊಸ ಕಲಂ ಸೇರ್ಪಡೆ
ಕರಾರಸಾ ಸಂಸ್ಥೆಯ ನೌಕರರ ರಜಾ ನಿಯಮಗಳು 1964ರ ನಿಯಮ 20ಕ್ಕೆ ತಿದ್ದುಪಡಿ ತಂದು, ಹೊಸದಾಗಿ 20ಎ ನಿಯಮವನ್ನು ಸೇರ್ಪಡೆ ಮಾಡಲಾಗಿದೆ. ನಿಗಮದ ನಿರ್ದೇಶಕರ ಮಂಡಳಿಯಲ್ಲಿ ಈ ಕುರಿತು ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ರಾಜ್ಯ ಸರ್ಕಾರದ ಒಪ್ಪಿಗೆಯೂ ಲಭಿಸಿದ ಬಳಿಕ ಅಧಿಕೃತ ಆದೇಶ ಹೊರಡಿಸಲಾಗಿದೆ.
ಹೆರಿಗೆಯ ದಿನಾಂಕದಿಂದ 15 ದಿನಗಳ ಅವಕಾಶ
ಹೊಸ ನಿಯಮದ ಅನ್ವಯ, ಅರ್ಹ ಪುರುಷ ನೌಕರರು ತಮ್ಮ ಪತ್ನಿಯ ಹೆರಿಗೆಯ ದಿನಾಂಕದಿಂದ ಆರಂಭವಾಗುವಂತೆ ಒಟ್ಟು 15 ದಿನಗಳ ಪಿತೃತ್ವ ರಜೆ ಪಡೆಯಬಹುದು. ಮಗುವಿನ ಜನನದ ಸಂದರ್ಭದಲ್ಲಿ ತಾಯಿಯ ಆರೈಕೆ, ನವಜಾತ ಶಿಶುವಿನ ಪಾಲನೆ ಹಾಗೂ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಲು ಈ ರಜೆ ಸಹಕಾರಿಯಾಗಲಿದೆ.
ಅಧಿಕಾರಿಗಳಿಗೆ ಅನುಷ್ಠಾನದ ಸೂಚನೆ
ನಿಗಮದ ಎಲ್ಲ ಇಲಾಖಾ ಮುಖ್ಯಸ್ಥರು ಮತ್ತು ವಿಭಾಗೀಯ ಮುಖ್ಯಸ್ಥರು ಹೊಸ ನಿಯಮವನ್ನು ಗಮನದಲ್ಲಿಟ್ಟುಕೊಂಡು ಅರ್ಹ ನೌಕರರಿಗೆ ಪಿತೃತ್ವ ರಜೆ ಮಂಜೂರು ಮಾಡುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಮಾತೃತ್ವ ರಜೆಯ ಜೊತೆಗೆ ತಂದೆಗೂ ಮಗುವಿನ ಜನನದ ಸಂದರ್ಭದಲ್ಲಿ ರಜೆ ಪಡೆಯುವ ಅವಕಾಶ ಕಲ್ಪಿಸಿರುವುದು ಸಾರಿಗೆ ನಿಗಮದ ನೌಕರರ ಕುಟುಂಬಗಳಿಗೆ ಅನುಕೂಲಕರ ನಿರ್ಧಾರವಾಗಿದೆ. ಇದರಿಂದ ನಿಗಮದ ಅರ್ಹ ಪುರುಷ ನೌಕರರು ತಂದೆಯಾಗಿ ತಮ್ಮ ಆರಂಭಿಕ ಕುಟುಂಬದ ಜವಾಬ್ದಾರಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ದೊರೆತಂತಾಗಿದೆ.
Peepal Media Desk
Peepal Media · ರಾಜ್ಯ ವಿಭಾಗ