ಪುಸ್ತಕ ಸಂತೆ ಹೆಸರಿನಲ್ಲಿ ಬಂಡವಾಳ ಕೆಲಸ ಮಾಡುತ್ತಿದೆ, ಜನನುಡಿ ಪುಸ್ತಕ ಮೇಳದಲ್ಲಿ – ಲಡಾಯಿ ಬಸೂ ಬೇಸರ
ಲಿಂಕ್ ನಕಲಿಸಲಾಗಿದೆ ✓
ಮಂಗಳೂರು: ಜನನುಡಿ 2026 ಪುಸ್ತಕ ಮೇಳಕ್ಕೆ ಚಾಲನೆ
ಮಂಗಳೂರು : ಇಂದು ಪುಸ್ತಕ ಸಂತೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಹಿಂದೆ ಯಾವ ಬಂಡವಾಳ ಕೆಲಸ ಮಾಡುತ್ತಿದೆ, ಯಾರು ಹೂಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಧಾರವಾಡದ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ (ಬಸೂ) ಹೇಳಿದರು.
ಯುವಜನ ರಾಜಕಾರಣ: ದಿಕ್ಕು – ಭವಿಷ್ಯ – ಸವಾಲು ಎಂಬ ಆಶಯದೊಂದಿಗೆ ಮಂಗಳೂರಿನ ಬಿಷಪ್ ಜತ್ತಣ್ಣ ಸಭಾಂಗಣದಲ್ಲಿ ಆರಂಭವಾದ ಜನನುಡಿ 2026 ಕಾರ್ಯಕ್ರಮದಲ್ಲಿ ಪುಸ್ತಕ ಮೇಳವನ್ನು ಅವರು ಉದ್ಘಾಟಿಸಿದರು.
ಜನನುಡಿ ಮತ್ತೆ ಪ್ರಾರಂಭವಾಗಿರುವುದು ಹೊಸ ಉತ್ಸಾಹ, ಹೊಸ ಜವಾಬ್ದಾರಿ ಮತ್ತು ಹೊಣೆಗಾರಿಕೆಯ ಅರಿವನ್ನು ಮೂಡಿಸಿದೆ ಎಂದರು.
“ಇಂದು ಪುಸ್ತಕ ಸಂತೆಗಳನ್ನು ಒಳಗೊಂಡಂತೆ ನಮ್ಮ ಭೌತಿಕ ವಿದ್ಯಮಾನಗಳನ್ನೆಲ್ಲ ಬಂಡವಾಳಶಾಹಿಗಳ ಅಧೀನಕ್ಕೆ ಒಪ್ಪಿಸುವ ಕೆಲಸ ನಡೆಯುತ್ತಿದೆ. ಅವರು ಪ್ರತಿನಿಧಿಸುವ ಹಿನ್ನೆಲೆಯಲ್ಲಿಯೇ ಇಡೀ ಬೌದ್ಧಿಕ ವಲಯವನ್ನೂ ಅಡಮಾನ ಇಡುವ ಕೆಲಸ ನಡೆಯುತ್ತಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕದಾದ್ಯಂತ ಸ್ವತಂತ್ರ ಧ್ವನಿಯನ್ನು ಮೊಳಗಿಸುತ್ತಿದ್ದ ಸಾಹಿತ್ಯಿಕ ವಲಯವನ್ನು ಇಂದು ಬಂಡವಾಳಶಾಹಿಗಳ ಅಧೀನಕ್ಕೆ ತಂದು, ಅದರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಇಂತಹ ಸಂದರ್ಭದಲ್ಲಿ ಜನನುಡಿಯಂತಹ ಜನಪರ ಸಂಘಟನೆಗಳು ಮತ್ತೆ ಜನಮುಖಿ ಆಶಯಗಳನ್ನು ಮುನ್ನೆಲೆಗೆ ತರುತ್ತಿರುವುದು ಬಹಳ ಮುಖ್ಯ ಎಂದು ಬಸೂ ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಅಭಿಮತ ಮಂಗಳೂರು ಮತ್ತು ಭಗತ್ ಸಿಂಗ್ ಮೆಮೋರಿಯಲ್ ಕಲ್ಚರಲ್ ಟ್ರಸ್ಟ್ ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಪತ್ರಕರ್ತ ಅನಿಲ್ ಹೊಸಮನಿ, ಡಾ. ಗಣಪತಿ ಎಕ್ಕಾರು ಉಪಸ್ಥಿತರಿದ್ದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ