ಪ್ರತಿರೋಧದ ಧ್ವನಿ ಇಂದಿಗೂ ಜೀವಂತವಾಗಿದೆ – ಪ್ರೊ. ನರೇಂದ್ರ ನಾಯಕ್
ಲಿಂಕ್ ನಕಲಿಸಲಾಗಿದೆ ✓
ಮಂಗಳೂರು : ವೈಜ್ಞಾನಿಕ ಮನೋಭಾವದ ಕುರಿತು ವಿದ್ಯಾರ್ಥಿಗಳ ಆಹ್ವಾನದ ಮೇರೆಗೆ ನೀಡಬೇಕಿದ್ದ ಸಂವಾದದ ಆಹ್ವಾನವನ್ನು ಹಿಂಪಡೆದ ಘಟನೆಯನ್ನು ಹಿರಿಯ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಪ್ರಸ್ತಾಪಿಸಿದ್ದು, ಧ್ವನಿ ಹತ್ತಿಕ್ಕುವ ಪ್ರಯತ್ನ ನಡೆದರೂ ಪ್ರತಿರೋಧದ ವಿಚಾರ ಸಾಯುವುದಿಲ್ಲ ಎಂದು ಹೇಳಿದ್ದಾರೆ.
ಉದ್ಘಾಟನಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ಸ್ಟಿಟ್ಯೂಟ್ ಆಫ್ ಮೈಕ್ರೋಬಯಾಲಜಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಐಐಟಿ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೈಜ್ಞಾನಿಕ ಮನೋಭಾವದ ಕುರಿತು ಮಾತನಾಡಿದ ಅನುಭವವನ್ನು ಹಂಚಿಕೊಂಡರು. 2013ರಲ್ಲಿ ಐಐಟಿ ಮದ್ರಾಸ್ನಲ್ಲಿ ನೀಡಿದ ‘My Scientific Temper’ ಭಾಷಣವನ್ನು ಉಲ್ಲೇಖಿಸಿದ ಅವರು, ಕಳೆದ ಜುಲೈ 6ರಂದು ಅಲ್ಲಿಂದ ‘ಶಾಸ್ತ್ರ’ (Shastra) ಕಾರ್ಯಕ್ರಮದ ‘ಫೈರ್ಸೈಡ್ ಚಾಟ್’ (Fireside Chat) ಸಂವಾದಕ್ಕೆ ಆಹ್ವಾನ ಬಂದಿತ್ತು ಎಂದು ತಿಳಿಸಿದರು.
ಆಡಳಿತ ವರ್ಗಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳಿಂದ, ಅದರಲ್ಲೂ ಹೊಸ ತಲೆಮಾರಿನ ಜೆನ್-ಜಿ ಯುವಜನರಿಂದ ಬಂದ ಆಹ್ವಾನವು ತಮಗೆ ಸಂತೋಷ ನೀಡಿತ್ತು ಎಂದ ಅವರು, ಕಳೆದ 50 ವರ್ಷಗಳಿಂದ ಯುವಜನರ ನಡುವೆಯೇ ತಾವು ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು. ಸುಮಾರು ಒಂದು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದ ಆ ಕಾರ್ಯಕ್ರಮದ ದಿನಾಂಕವನ್ನು ನವೆಂಬರ್ 11ಕ್ಕೆ ಮುಂದೂಡಲಾಗಿದೆ ಎಂಬ ಮಾಹಿತಿ ಬಂದ ಬಳಿಕ ದಿನಾಂಕ ವಿಚಾರಿಸಿದ್ದಕ್ಕೆ, “ಹತ್ತು ಜನ ಭಾಷಣಕಾರರ ಕಾರಣದಿಂದಾಗಿ ನಿಮ್ಮ ಆಹ್ವಾನವನ್ನು ಹಿಂಪಡೆಯಲಾಗಿದೆ” ಎಂಬ ಉತ್ತರ ಬಂದಿತು ಎಂದು ವಿವರಿಸಿದರು.
ಆಹ್ವಾನ ನೀಡಿ ನಂತರ ಹಿಂಪಡೆದ ಈ ಕ್ರಮವನ್ನು ಏನೆಂದು ಕರೆಯಬೇಕೆಂದು ತಿಳಿಯದಿದ್ದರೂ, ಇದು ಉದ್ದೇಶಪೂರ್ವಕ ಮತ್ತು ಮೇಲಿನಿಂದ ಬಂದ ನಿರ್ಧಾರ ಎಂಬುದು ಸ್ಪಷ್ಟವಾಗಿದೆ ಎಂದು ಪ್ರೊ. ನರೇಂದ್ರ ನಾಯಕ್ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ, 2027ರ ಜನವರಿ 5ರಂದು ಸಂಗಾತಿಗಳು ಇದೇ ವಿಷಯದ ಕುರಿತು ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಪ್ರತಿರೋಧದ ಧ್ವನಿ ಇಂದಿಗೂ ಜೀವಂತವಾಗಿದೆ ಎಂದು ಹೇಳಿದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ