ಸಾರ್ವಜನಿಕ ಶಿಕ್ಷಣ, ರಾಷ್ಟ್ರೀಕೃತ ಆರೋಗ್ಯ ಸೇವೆ ಮತ್ತು ಸಾರಿಗೆ ಬಲವಾಗಬೇಕಿದೆ – ಡಾ. ಸಬಿತಾ ಬನ್ನಾಡಿ
ಲಿಂಕ್ ನಕಲಿಸಲಾಗಿದೆ ✓
ಮಂಗಳೂರು : ಭವಿಷ್ಯದ ಭಾರತದ ಆರ್ಥಿಕತೆ ಮತ್ತು ಜೀವನೋಪಾಯವನ್ನು ಕೇವಲ ಅಂಕಿಅಂಶಗಳು ಅಥವಾ ಕಾರ್ಪೊರೇಟ್ ಲಾಭದ ಕಣ್ಣಿನಿಂದ ನೋಡದೆ, ಅದಕ್ಕೆ ಪ್ರೀತಿ, ಕಳಕಳಿ ಮತ್ತು ಸಾಮಾಜಿಕತೆಯಿಂದ ನೋಡಬೇಕಿದೆನೀಡುವ ಡಾ. ಸಬಿತಾ ಬನ್ನಾಡಿ.
ಕೋವಿಡ್ ಕಾಲದ ವಲಸೆ ಕಾರ್ಮಿಕರ ಸಂಕಷ್ಟವನ್ನು ದಾಖಲಿಸಿದ ವಿನೋದ್ ಕಾಪ್ರಿ ಅವರ ‘1232 ಕಿಲೋಮೀಟರ್ಸ್’ ಪುಸ್ತಕದ ಘಟನೆಗಳನ್ನು ಉಲ್ಲೇಖಿಸಿದ ಅವರು, ಹಸಿವಿನಿಂದ ಬಳಲುತ್ತಿದ್ದವರಿಗೆ ದಾರಿ ತೋರಿಸಿ, ತಾವೂ ಕಷ್ಟದಲ್ಲಿದ್ದರೂ ಏಳು ಸೈಕಲ್ಗಳ ಪಂಕ್ಚರ್ ಸರಿಪಡಿಸಿ ಹಣ ಪಡೆಯಲು ನಿರಾಕರಿಸಿದ ಇರ್ಷಾದ್ ಎಂಬ ಪಂಕ್ಚರ್ ಹಾಕುವವರನ್ನು ನೆನಪಿಸಿಕೊಂಡರು. ಸಾಮಾನ್ಯ ಮನುಷ್ಯನಲ್ಲಿರುವ ಈ ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿ ಆರ್ಥಿಕತೆಯ ಅಡಿಪಾಯವಾಗಬೇಕು ಎಂದರು.
ಹೊರಗಿನ ಬಂಡವಾಳವನ್ನೇ ನೆಚ್ಚಿಕೊಳ್ಳುವ ಬದಲು, ನಮ್ಮದೇ ಸಂಪನ್ಮೂಲ ಮತ್ತು ಶ್ರಮದಿಂದ ಸ್ವಾಭಿಮಾನದ ಆರ್ಥಿಕತೆಯನ್ನು ಕಟ್ಟಲು ಸಾಧ್ಯವಿದೆ ಎಂದು ಹೇಳಿದ ಡಾ. ಸಬಿತಾ ಬನ್ನಾಡಿ, ಗ್ರಾಮ ಪಂಚಾಯತ್ ಮಟ್ಟದಲ್ಲೇ ಕೃಷಿ ಉತ್ಪನ್ನಗಳ ಸಂಸ್ಕರಣೆ, ಸಂಗ್ರಹಣೆ ಮತ್ತು ಮಾರುಕಟ್ಟೆ ಘಟಕಗಳನ್ನು ರೂಪಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಬಹುದೆಂದು ಸಲಹೆ ನೀಡಿದರು. ಪೌರಕಾರ್ಮಿಕರ ದುಡಿಮೆಯನ್ನು ಯಂತ್ರ ಮತ್ತು ತಂತ್ರಜ್ಞಾನದ ಸಮನ್ವಯದೊಂದಿಗೆ ಮೇಲ್ದರ್ಜೆಗೇರಿಸಿ, ಘನತೆ ಹಾಗೂ ಸೂಕ್ತ ವೇತನ ನೀಡಬೇಕೆಂದು ಒತ್ತಾಯಿಸಿದರು.
ಇಂದಿನ ಉದ್ಯೋಗ ಕ್ಷೇತ್ರದ ವಾಸ್ತವವನ್ನು ಬಿಚ್ಚಿಟ್ಟ ಅವರು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ‘ಗಿಗ್ ಎಕಾನಮಿ’ ಹೆಸರಿನಲ್ಲಿ 12 ಗಂಟೆಗಳ ದುಡಿಮೆ, ಕೂರಲು ಅವಕಾಶವಿಲ್ಲದ ಸ್ಥಿತಿ ಮತ್ತು ಕಣ್ಗಾವಲಿನ ಮೂಲಕ ಮನುಷ್ಯರನ್ನು ನವ-ಗುಲಾಮರನ್ನಾಗಿ ನಡೆಸಿಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಹಾಗೆಯೇ ಸಿನಿಮಾ, ಮಾಧ್ಯಮ, ಫ್ಯಾಷನ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಮೇಲಿನ ಶೋಷಣೆಯನ್ನು ಸಹಜಗೊಳಿಸುತ್ತಿರುವುದನ್ನು ವಿರೋಧಿಸಿದರು.
ಬಡತನವನ್ನು ಉಳಿಸಿಕೊಂಡು, ಮಧ್ಯಮ ವರ್ಗವನ್ನು ಮತದಾರರನ್ನಾಗಿ ಮಾತ್ರ ಬಳಸಿಕೊಳ್ಳುವ ಮತ್ತು ಅತಿ ಶ್ರೀಮಂತರನ್ನು ಪೋಷಿಸುವ ವ್ಯವಸ್ಥೆಯ ವಿರುದ್ಧ ಸಾಂಸ್ಕೃತಿಕ ರಾಜಕಾರಣ ಮತ್ತು ಜನಪರ ಪ್ರಜ್ಞೆ ಬೆಳೆಯಬೇಕೆಂದರು. ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು ಹೋರಾಟಕ್ಕಿಳಿಯುವ ಸ್ಥಿತಿ ಮತ್ತು ಸರ್ಕಾರಿ ಶಾಲೆಗಳ ಮುಚ್ಚುವಿಕೆಯಿಂದ ಕನ್ನಡ ಹಾಗೂ ಜನರ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಎಚ್ಚರಿಸಿದರು.
ಸರ್ಕಾರಗಳು ಸಾರ್ವಜನಿಕ ಶಿಕ್ಷಣ, ರಾಷ್ಟ್ರೀಕೃತ ಆರೋಗ್ಯ ಸೇವೆ ಮತ್ತು ಬಲವಾದ ಸಾರ್ವಜನಿಕ ಸಾರಿಗೆ—ಈ ಮೂರು ಮೂಲಭೂತ ಸೇವೆಗಳನ್ನು ಗಟ್ಟಿಯಾಗಿ ಒದಗಿಸಿದರೆ, ಕುಟುಂಬಗಳು ಆಸ್ಪತ್ರೆ ಮತ್ತು ಖಾಸಗಿ ಶಾಲೆಗಳ ಹೊರೆಯನ್ನು ತಪ್ಪಿಸಿಕೊಂಡು ನೆಮ್ಮದಿಯಿಂದ ಬದುಕಬಹುದು ಎಂದರು. ಕರಾವಳಿಯ ಮನೆಗಳಲ್ಲಿ ಒಂದು ಮೊಟ್ಟೆಯಲ್ಲೇ ಎಲ್ಲರಿಗೂ ಹಂಚಿ ತಿನ್ನುವ ‘ಊಟದ ತಟ್ಟೆಯ ಆರ್ಥಿಕತೆ’ ಮತ್ತು ಹಿಂದಿನ ಸಮುದಾಯಸ್ನೇಹಿ ಕೈಗಾರಿಕಾ ವಸಾಹತುಗಳ ಮಾದರಿಗಳನ್ನು ಉದಾಹರಿಸಿದರು.
ಕೋವಿಡ್ ಸಂದರ್ಭದಲ್ಲಿ ಕೇರಳದ ಅಂದಿನ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರ ಮುನ್ನೆಚ್ಚರಿಕೆ ಮತ್ತು ಧೈರ್ಯ ತುಂಬುವ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ತಾರತಮ್ಯವಿಲ್ಲದ, ಸಮಾನ ಹಂಚಿಕೆ ಮತ್ತು ಸಂವೇದನಾಶೀಲತೆಯುಳ್ಳ ಸಮೃದ್ಧ ಭಾರತವನ್ನು ಒಟ್ಟಾಗಿ ಕಟ್ಟೋಣ ಎಂದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ