ಕನ್ನಡದ ಅಸ್ಮಿತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಹೋರಾಟಕ್ಕೆ ಮುನ್ನುಗ್ಗಬೇಕಿದೆ – ರಮೇಶ್ ಬೆಲ್ಲಂಕೊಂಡ
ಲಿಂಕ್ ನಕಲಿಸಲಾಗಿದೆ ✓
ಮಂಗಳೂರು : ಬಡತನ ಮತ್ತು ಸಾಮಾಜಿಕ ದಬ್ಬಾಳಿಕೆಯಿಲ್ಲದೆ ಪ್ರತಿಯೊಬ್ಬರೂ ಕರ್ನಾಟಕ ಹಾಗೂ ಭಾರತವನ್ನು ಕಟ್ಟುವುದೆ ನಮ್ಮ ಗುರಿಯಾಗಬೇಕಿದೆ, ಪ್ರಜಾಪ್ರಭುತ್ವವನ್ನು ಉಳಿಸಲು ನಾಗರಿಕರು ಮುಂದೆ ಬರಬೇಕೆಂದು ‘ಕನ್ನಡ ಭಾರತೀಯರು’ (‘ಕನ್ನಡ ಇಂಡಿಯನ್ಸ್ ಫಾರ್ ಜಸ್ಟಿಸ್ ಫಾರ್ ಆಲ್ ಇಂಡಿಯನ್ಸ್’) ಸಂಘಟನೆಯ ಸಂಚಾಲಕ ರಮೇಶ್ ಬೆಲ್ಲಂಕೊಂಡ ಕರೆ ನೀಡಿದ್ದಾರೆ.
ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸರಣಿ ಪೆಟ್ಟುಗಳು ಬೀಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಎಸ್ಐಆರ್ (SIR) ಕುರಿತು ತಮ್ಮ ಸಂಘಟನೆಯು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಕಿರುಪುಸ್ತಕ ಹಾಗೂ ಕರಪತ್ರಗಳನ್ನು ಪ್ರಕಟಿಸಿ ಹಂಚಿದ್ದು, ಪ್ರಜಾಪ್ರಭುತ್ವದ ರಕ್ಷಣೆಗೆ ಜನರು ಇವುಗಳನ್ನು ಓದಿ ತಮ್ಮ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು. ಚುನಾವಣಾ ಪ್ರಕ್ರಿಯೆ, ಚುನಾವಣಾ ಆಯೋಗ, ಒಕ್ಕೂಟ ಸರ್ಕಾರ ಹಾಗೂ ಆರ್ಎಸ್ಎಸ್–ಬಿಜೆಪಿ ಧೋರಣೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರಜಾಪ್ರಭುತ್ವವನ್ನು ಕಾಪಾಡುವ ಕೊನೆಯ ರಕ್ಷಣಾ ರೇಖೆ ದೇಶದ ಜನರೇ ಆಗಿದ್ದಾರೆ ಎಂದರು.
ಹಿಂದಿ ಹೇರಿಕೆ ಮತ್ತು ಭಾಷಾ ತಾರತಮ್ಯದ ವಿಚಾರವನ್ನು ಪ್ರಸ್ತಾಪಿಸಿದ ರಮೇಶ್ ಬೆಲ್ಲಂಕೊಂಡ, ಕನ್ನಡ ಮತ್ತು ಕನ್ನಡಿಗರನ್ನು ಸಮಾನವಾಗಿ ಕಾಣದೆ ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ರಾಷ್ಟ್ರೀಕೃತ ಬ್ಯಾಂಕ್ಗಳು, ಬೆಂಗಳೂರು ವಿಮಾನ ನಿಲ್ದಾಣದ ಭದ್ರತಾ ನೇಮಕಾತಿಗಳು, ಯುಪಿಎಸ್ಸಿ, ಎಸ್ಎಸ್ಸಿ, ರೈಲ್ವೆ, ಬ್ಯಾಂಕಿಂಗ್ ಹಾಗೂ ಕೇಂದ್ರ ವಿಶ್ವವಿದ್ಯಾಲಯಗಳ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸೂಕ್ತ ಅವಕಾಶ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಲಬುರಗಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪ್ರವೇಶ ಪ್ರಕಟಣೆಯಲ್ಲಿ ಕನ್ನಡದ ಆಯ್ಕೆ ಇಲ್ಲದಿದ್ದುದನ್ನು ಅವರು ಉದಾಹರಣೆಯಾಗಿ ನೀಡಿದರು.
ಈ ಪರಿಸ್ಥಿತಿಗೆ ಕಾಂಗ್ರೆಸ್ 80 ವರ್ಷಗಳಿಂದ ಕಾರಣವಾಗಿದ್ದರೆ, ಬಿಜೆಪಿ ಅದನ್ನು ವೇಗವಾಗಿ ಮುಂದುವರಿಸುತ್ತಿದೆ ಎಂದು ಟೀಕಿಸಿದರು. ರಾಜ್ಯ ಶಿಕ್ಷಣ ನೀತಿ ಸಮಿತಿಯ ವರದಿ ಬಂದರೂ ಅದನ್ನು ಬಹಿರಂಗಪಡಿಸದ ಮತ್ತು ಜಾರಿಗೊಳಿಸದ ರಾಜ್ಯ ಸರ್ಕಾರದ ಧೋರಣೆಯನ್ನೂ ಅವರು ಪ್ರಶ್ನಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರಿಯಾದ ಅನುದಾನ ನೀಡದೆ ವಿದ್ಯುತ್ ಬಿಲ್ ಪಾವತಿಸಲೂ ಪರದಾಡುವ ಸ್ಥಿತಿ ತಂದಿರುವುದನ್ನು ಖಂಡಿಸಿದರು.
ಅವೈಜ್ಞಾನಿಕ ಚಿಂತನೆಗಳ ವಿರುದ್ಧ ನಿಂತು ವೈಜ್ಞಾನಿಕ ಮನೋಭಾವವನ್ನು ಕಾಪಾಡಿಕೊಳ್ಳಬೇಕು ಹಾಗೂ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ