ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಕೋಮುವಾದ ಮತ್ತು ಏಕಸ್ವಾಮ್ಯ ಬಂಡವಾಳಶಾಹಿ ನಡುವಿನ ಅಪವಿತ್ರ ಮೈತ್ರಿಯೇ ಫ್ಯಾಸಿಸಂ ಬೆಳವಣಿಗೆಗೆ ಕಾರಣ: ಟಿ.ಎಲ್. ಕೃಷ್ಣೇಗೌಡಬಂಡವಾಳಶಾಹಿ-ರಾಜಕೀಯ ಅಧಿಕಾರದ ಮೈತ್ರಿಗೆ ಕೋಮುವಾದವೇ ರಕ್ಷಾಕವಚ: ಎ. ನಾರಾಯಣ್ರಾಷ್ಟ್ರೀಯತೆ ಧರ್ಮದ ಆಧಾರದಲ್ಲಿ ಸೀಮಿತವಾಗಬಾರದು; ಸಾಮಾಜಿಕ ಸಮಾನತೆಯೇ ರಾಷ್ಟ್ರ ನಿರ್ಮಾಣದ ಅಡಿಪಾಯ: ವಸಂತ್ ಕಲಾಲ್ಅಲ್ಗಾರಿದಮ್‌ಗಳ ಮೂಲಕ ಜನರ ಆಲೋಚನೆಗಳ ಮೇಲೆಯೇ ಹಿಡಿತ ಸಾಧಿಸುವ ಪ್ರಯತ್ನ: ಡಿಜಿಟಲ್ ರಾಜಕಾರಣದ ಕುರಿತು ಜಿ. ವಿಷ್ಣು ಆತಂಕಶಿಕ್ಷಣದ ಖಾಸಗೀಕರಣ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಅಪಾಯ: ಬಿ. ಸುರೇಶ್ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯಕ್ಕೆ ಜಾತಿ ವ್ಯವಸ್ಥೆ, ಖಾಸಗೀಕರಣವೇ ಅಡ್ಡಿ: ಶ್ರೀಪಾದ್ ಭಟ್12 ದಿನಗಳ ಅಹೋರಾತ್ರಿ ಹೋರಾಟಕ್ಕೆ ಮಣಿದ ಸರ್ಕಾರ: ಆಶಾ ಕಾರ್ಯಕರ್ತೆಯರ ಗೌರವಧನ ₹2 ಸಾವಿರ ಹೆಚ್ಚಳಕನ್ನಡದ ಅಸ್ಮಿತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಹೋರಾಟಕ್ಕೆ ಮುನ್ನುಗ್ಗಬೇಕಿದೆ – ರಮೇಶ್ ಬೆಲ್ಲಂಕೊಂಡಫ್ಯಾಸಿಸಂ ಯಾವತ್ತೂ ನಮ್ಮ ಆಯ್ಕೆ ಆಗಬಾರದು – ಶಿವಸುಂದರ್ಜೆನ್‌-ಝಿ ಯುವಜನರು ದಾರಿ ತಪ್ಪಿಲ್ಲ, ಅಸಮಾನತೆಯ ವಿರುದ್ಧ ಹೋರಾಡುತ್ತಿರುವ ತಲೆಮಾರು: ಅಶ್ಫಕ್ ಕೊಪ್ಪಳಸಾರ್ವಜನಿಕ ಶಿಕ್ಷಣ, ರಾಷ್ಟ್ರೀಕೃತ ಆರೋಗ್ಯ ಸೇವೆ ಮತ್ತು ಸಾರಿಗೆ ಬಲವಾಗಬೇಕಿದೆ – ಡಾ. ಸಬಿತಾ ಬನ್ನಾಡಿಪ್ರತಿರೋಧದ ಧ್ವನಿ ಇಂದಿಗೂ ಜೀವಂತವಾಗಿದೆ – ಪ್ರೊ. ನರೇಂದ್ರ ನಾಯಕ್ಚುನಾವಣೆಯೊಂದೇ ಬದಲಾವಣೆಯ ಮಾರ್ಗವಲ್ಲ, ಜನಪರ ಪರ್ಯಾಯ ರಾಜಕಾರಣ ರೂಪಿಸಬೇಕು: ನಂದಕುಮಾರ್ ಕುಂಬ್ರಿಉಬ್ಬುಫ್ಯಾಸಿಸಂ ವಿರೋಧವೆಂದರೆ ಕೇವಲ ಬಿಜೆಪಿ ವಿರೋಧವಲ್ಲ; ಬ್ರಾಹ್ಮಣವಾದ ಮತ್ತು ಬಂಡವಾಳಶಾಹಿ ವಿರುದ್ಧದ ಹೋರಾಟವೂ ಆಗಬೇಕು: ಚಿಂತಕ ಶಿವಸುಂದರ್ಪ್ರಜಾಪ್ರಭುತ್ವದ ಕೊನೆಯ ರಕ್ಷಣಾ ಶಕ್ತಿ ಜನರೇ; ಹಿಂದಿ ಹೇರಿಕೆ ವಿರುದ್ಧವೂ ಹೋರಾಟ ಅಗತ್ಯ: ಡಾ.ರಮೇಶ್ ಬೆಲ್ಲಂಕೊಂಡಕೈಗಾರಿಕೆ, ಮಾಧ್ಯಮದ ಬಳಿಕ ರಾಜಕೀಯ ವ್ಯವಸ್ಥೆಯ ಮೇಲೂ ಕಾರ್ಪೊರೇಟ್ ಹಿಡಿತದ ಆತಂಕ: ಎ.ಬಿ. ಇಬ್ರಾಹಿಂ, ನಿವೃತ್ತ ಐಎಎಸ್ ಅಧಿಕಾರಿಚಳಿ, ಮಳೆ ಎನ್ನದೆ ಕುಳಿತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಪರವಾಗಿ ನನ್ನ ಈ ಉದ್ಘಾಟನಾ ಭಾಷಣವನ್ನು ಅರ್ಪಿಸುತ್ತೇನೆ – ರಹಮತ್ ತರೀಕೆರೆಸಂವಾದ ಕಳೆದುಕೊಳ್ಳುತ್ತಿರುವ ಭಾರತಕ್ಕೆ Gen Z ಹೊಸ ರಾಜಕೀಯ ಭಾಷೆ ಕಲಿಸುತ್ತಿದೆ: ರಹಮತ್ ತರೀಕೆರೆಪುಸ್ತಕ ಸಂತೆ ಹೆಸರಿನಲ್ಲಿ ಬಂಡವಾಳ ಕೆಲಸ ಮಾಡುತ್ತಿದೆ, ಜನನುಡಿ ಪುಸ್ತಕ ಮೇಳದಲ್ಲಿ – ಲಡಾಯಿ ಬಸೂ ಬೇಸರಜಿಪಿಎಸ್ ಮೂಲಕ ಬಾಡಿಗೆ ಕಾರಿನ ಎಂಜಿನ್ ಸ್ಥಗಿತಗೊಳಿಸಿ ನಾಲ್ವರು ಅಪಹರಣಕಾರರನ್ನು ಬಂಧಿಸಿದ ಪೊಲೀಸರು

ಅಲ್ಗಾರಿದಮ್‌ಗಳ ಮೂಲಕ ಜನರ ಆಲೋಚನೆಗಳ ಮೇಲೆಯೇ ಹಿಡಿತ ಸಾಧಿಸುವ ಪ್ರಯತ್ನ: ಡಿಜಿಟಲ್ ರಾಜಕಾರಣದ ಕುರಿತು ಜಿ. ವಿಷ್ಣು ಆತಂಕ

PPeepal Media Desk

Peepal Media Desk ರಾಜಕೀಯ, ರಾಜ್ಯ, ವಿಶೇಷ

• 3 ನಿಮಿಷದ ಓದು

ಅಲ್ಗಾರಿದಮ್‌ಗಳ ಮೂಲಕ ಜನರ ಆಲೋಚನೆಗಳ ಮೇಲೆಯೇ ಹಿಡಿತ ಸಾಧಿಸುವ ಪ್ರಯತ್ನ: ಡಿಜಿಟಲ್ ರಾಜಕಾರಣದ ಕುರಿತು ಜಿ. ವಿಷ್ಣು ಆತಂಕ

ಸಾಮಾಜಿಕ ಮಾಧ್ಯಮವನ್ನು ರಾಜಕೀಯ ಪ್ರಚಾರದ ಅಸ್ತ್ರವನ್ನಾಗಿಸಿಕೊಂಡ ಸಂಘಟಿತ ಶಕ್ತಿಗಳು; ಪರ್ಯಾಯವಾಗಿ ಜನಪರ ಡಿಜಿಟಲ್ ಚಳವಳಿ ಮತ್ತು ಬೀದಿ ಸಂಘಟನೆಗೆ ಕರೆ

ಮಂಗಳೂರು: ಇಂಟರ್‌ನೆಟ್ ಒಂದು ಕಾಲದಲ್ಲಿ ಮುಕ್ತ ಚರ್ಚೆ, ಪ್ರಜಾಸತ್ತಾತ್ಮಕ ಸಂವಾದ ಮತ್ತು ಪರ್ಯಾಯ ವಿಚಾರಧಾರೆಗಳಿಗೆ ವೇದಿಕೆಯಾಗಿತ್ತು. ಆದರೆ ಕಳೆದ ಒಂದು ದಶಕದಲ್ಲಿ ಕಾರ್ಪೊರೇಟ್ ಸಂಸ್ಥೆಗಳು, ರಾಜಕೀಯ ಶಕ್ತಿಗಳು ಮತ್ತು ಸಂಘಟಿತ ಪ್ರಚಾರ ವ್ಯವಸ್ಥೆಗಳು ಡಿಜಿಟಲ್ ವೇದಿಕೆಗಳ ಮೇಲೆ ಹಿಡಿತ ಸಾಧಿಸುವ ಮೂಲಕ ಜನರ ಆಲೋಚನೆ, ಅಭಿಪ್ರಾಯ ಹಾಗೂ ಸಾಮಾಜಿಕ ಅಸ್ಮಿತೆಯನ್ನು ಪ್ರಭಾವಿಸುವ ಪ್ರಯತ್ನ ನಡೆಸುತ್ತಿವೆ ಎಂದು ಜಿ. ವಿಷ್ಣು ಆತಂಕ ವ್ಯಕ್ತಪಡಿಸಿದರು.

ಮಂಗಳೂರಿನ ಕೆಟಿಸಿ ಕ್ಯಾಂಪಸ್‌ನಲ್ಲಿ ನವೆಂಬರ್ 28 ಮತ್ತು 29ರಂದು ನಡೆಯುತ್ತಿರುವ ‘ಜನನುಡಿ–2026’ ಯುವಜನ ರಾಜಕಾರಣ: ದಿಕ್ಕು–ಭವಿಷ್ಯ–ಸವಾಲುಗಳು ಕಾರ್ಯಕ್ರಮದಲ್ಲಿ ‘ರಾಷ್ಟ್ರೀಯತೆ, ಅಸ್ಮಿತೆ ಮತ್ತು ಡಿಜಿಟಲ್ ರಾಜಕಾರಣ’ ವಿಷಯವಾಗಿ ಮಾತನಾಡಿದ ಅವರು, ಇಂದಿನ ರಾಜಕೀಯದಲ್ಲಿ ಇಂಟರ್‌ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂದರು.

ಇಂಟರ್‌ನೆಟ್ ಆರಂಭದ ದಿನಗಳಲ್ಲಿ ಅದು ಎಲ್ಲರಿಗೂ ಮುಕ್ತವಾಗಿದ್ದ ಪ್ರಜಾಸತ್ತಾತ್ಮಕ ವೇದಿಕೆಯಾಗಿತ್ತು. ವಿವಿಧ ವಿಚಾರಧಾರೆಗಳು, ಚರ್ಚೆಗಳು ಮತ್ತು ಪರ್ಯಾಯ ರಾಜಕೀಯ ಚಿಂತನೆಗಳಿಗೆ ಅಲ್ಲಿ ಅವಕಾಶವಿತ್ತು. 1998ರಿಂದಲೇ ಕಾರ್ಯನಿರ್ವಹಿಸುತ್ತಿರುವ Marxists.org ವೆಬ್‌ಸೈಟ್‌ನಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ಅವರ ಕೃತಿಗಳು ಇಂದಿಗೂ ಉಚಿತವಾಗಿ ಲಭ್ಯವಿರುವುದು ಇಂಟರ್‌ನೆಟ್‌ನ ಆರಂಭಿಕ ಆಶಯಗಳಿಗೆ ಉದಾಹರಣೆಯಾಗಿದೆ ಎಂದು ಹೇಳಿದರು.

2011ರ ಆಕ್ಯುಪೈ ವಾಲ್‌ಸ್ಟ್ರೀಟ್ ಮತ್ತು 2013ರ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಚಳವಳಿಗಳು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಜನರನ್ನು ಸಂಘಟಿಸಿದ ಪ್ರಮುಖ ಬೆಳವಣಿಗೆಗಳಾಗಿವೆ. ಕಾರ್ಪೊರೇಟ್ ದುರಾಸೆ, ಆರ್ಥಿಕ ಅಸಮಾನತೆ ಮತ್ತು ಅಮೆರಿಕದಲ್ಲಿ ಕಪ್ಪು ಸಮುದಾಯದವರ ವಿರುದ್ಧ ನಡೆಯುತ್ತಿದ್ದ ಪೊಲೀಸ್ ದೌರ್ಜನ್ಯದ ವಿರುದ್ಧ ಈ ಚಳವಳಿಗಳು ಧ್ವನಿ ಎತ್ತಿದ್ದವು. ಹ್ಯಾಶ್‌ಟ್ಯಾಗ್‌ಗಳ ಮೂಲಕ ಜನರನ್ನು ಒಗ್ಗೂಡಿಸಿ ಅಧಿಕಾರ ವ್ಯವಸ್ಥೆಯನ್ನು ಪ್ರಶ್ನಿಸುವ ಶಕ್ತಿ ಸಾಮಾಜಿಕ ಮಾಧ್ಯಮಕ್ಕಿದೆ ಎಂಬುದನ್ನು ಅವು ತೋರಿಸಿಕೊಟ್ಟವು ಎಂದರು.

ಆದರೆ ಇದೇ ಡಿಜಿಟಲ್ ವೇದಿಕೆಗಳನ್ನು ನಂತರ ಸಂಘಟಿತ ರಾಜಕೀಯ ಪ್ರಚಾರ ಮತ್ತು ದ್ವೇಷದ ಹರಡುವಿಕೆಗೆ ಬಳಸಿಕೊಳ್ಳಲಾಯಿತು. ಜನರ ಆಸಕ್ತಿ, ಭಾವನೆ ಮತ್ತು ಆಲೋಚನೆಗಳನ್ನು ಅಲ್ಗಾರಿದಮ್‌ಗಳು ನಿಯಂತ್ರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ವಿಡಿಯೊಗಳು ಮತ್ತು ರೀಲ್‌ಗಳನ್ನು ವೀಕ್ಷಿಸುವಂತೆ ಮಾಡುವುದರ ಹಿಂದೆ ಈ ಅಲ್ಗಾರಿದಮ್‌ಗಳ ಪಾತ್ರವಿದೆ. ಜನರ ಮನಸ್ಸಿನ ಮೇಲೆ ಪ್ರಭಾವ ಬೀರುವ ಈ ವ್ಯವಸ್ಥೆಯನ್ನು ಅವರು ‘ಅಲ್ಗಾರಿದಮ್ ದೇವರು’ ಎಂದು ವ್ಯಂಗ್ಯವಾಗಿ ಬಣ್ಣಿಸಿದರು.

ಭಾರತದಲ್ಲಿ ಬಿಜೆಪಿ ಐಟಿ ಸೆಲ್‌ನ ಬೆಳವಣಿಗೆಯನ್ನು ಪ್ರಸ್ತಾಪಿಸಿದ ವಿಷ್ಣು, 2014ರ ಚುನಾವಣೆಗೆ ಮುನ್ನವೇ ಸಾಮಾಜಿಕ ಮಾಧ್ಯಮಗಳ ಮೂಲಕ ಮತದಾರರನ್ನು ತಲುಪುವ ವ್ಯವಸ್ಥಿತ ಕಾರ್ಯಾಚರಣೆ ಆರಂಭವಾಗಿತ್ತು ಎಂದು ಹೇಳಿದರು. 2012–13ರ ಅವಧಿಯಲ್ಲಿ ದೆಹಲಿಯಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪನ್ನಾ ಪ್ರಮುಖರಿಗೆ ವಾಟ್ಸ್‌ಆ್ಯಪ್ ಮೂಲಕ ಮನೆಮನೆ ಸಂಪರ್ಕ ಸಾಧಿಸುವ ಗುರಿ ನೀಡಲಾಗಿದ್ದ ಬಗ್ಗೆ ಮಾಹಿತಿ ದೊರೆತಿತ್ತು. 2014ರ ಚುನಾವಣೆಗೆ ಮುನ್ನವೇ ಈ ರೀತಿಯ ಡಿಜಿಟಲ್ ಪ್ರಚಾರ ವ್ಯವಸ್ಥೆ ಸಂಘಟಿತ ಸ್ವರೂಪ ಪಡೆದುಕೊಂಡಿತ್ತು ಎಂದು ವಿವರಿಸಿದರು.

2014ರ ನಂತರ ಈ ಪ್ರಚಾರ ವ್ಯವಸ್ಥೆ ಮತ್ತಷ್ಟು ಆಕ್ರಮಣಕಾರಿಯಾಯಿತು. ದ್ವೇಷವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಯಿತು. ಮುಸ್ಲಿಮರನ್ನು ಗುರಿಯಾಗಿಸಿಕೊಂಡ ವಿವಿಧ ಅಭಿಯಾನಗಳು, ‘ಲವ್ ಜಿಹಾದ್’ನಂತಹ ಆರೋಪಗಳು ಮತ್ತು ಎಡಪಂಥೀಯರನ್ನು ಗುರಿಯಾಗಿಸಿಕೊಂಡ ‘ಅರ್ಬನ್ ನಕ್ಸಲ್’ ಎಂಬ ಹಣೆಪಟ್ಟಿಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸಂಘಟಿತ ಪ್ರಚಾರ ನಡೆಯಿತು. ಇಂತಹ ಅಭಿಯಾನಗಳು ಕೇವಲ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸುವುದಕ್ಕೆ ಸೀಮಿತವಾಗದೆ, ಭಾರತೀಯ ರಾಷ್ಟ್ರೀಯ ಅಸ್ಮಿತೆಯ ಸ್ವರೂಪವನ್ನೇ ಬದಲಾಯಿಸುವ ಪ್ರಕ್ರಿಯೆಗೆ ಕಾರಣವಾದವು ಎಂದು ವಿಶ್ಲೇಷಿಸಿದರು.

ನೋಟು ಅಮಾನ್ಯೀಕರಣದ ಸಂದರ್ಭದಲ್ಲಿಯೂ ಆರ್ಥಿಕ ಪರಿಣಾಮಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದುರಾದರೂ, ಸಾಮಾಜಿಕ ಮಾಧ್ಯಮಗಳಲ್ಲಿ ನಡೆದ ಪ್ರಚಾರದ ಮೂಲಕ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಬೆಂಬಲ ರೂಪಿಸುವ ಪ್ರಯತ್ನ ನಡೆಯಿತು. ಭ್ರಷ್ಟಾಚಾರ ನಿರ್ಮೂಲನೆ ಮತ್ತು ಕಪ್ಪುಹಣ ವಾಪಸಾತಿಯ ಭರವಸೆಗಳನ್ನು ಜನರ ನಡುವೆ ಹರಡಲಾಯಿತು. ವಾಸ್ತವಿಕ ಆರ್ಥಿಕ ಬೆಳವಣಿಗೆಗಿಂತ ಪ್ರಚಾರದ ಮೂಲಕವೇ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸುವ ಪ್ರವೃತ್ತಿ ಹೆಚ್ಚಾಯಿತು ಎಂದು ಟೀಕಿಸಿದರು.

‘ನ್ಯೂ ಇಂಡಿಯಾ’ ಎಂಬ ಪರಿಕಲ್ಪನೆಯ ಬೆಳವಣಿಗೆಯೊಂದಿಗೆ ದೇಶದೊಳಗೆ ಯಾರು ಸೇರಬೇಕು, ಯಾರು ಹೊರಗುಳಿಯಬೇಕು ಎಂಬ ವಿಭಜಕ ಮನೋಭಾವವೂ ಬಲಗೊಂಡಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆಮ್ಲಜನಕದ ಕೊರತೆ, ಗಂಗಾ ನದಿಯಲ್ಲಿ ತೇಲಿಬಂದ ಮೃತದೇಹಗಳು ಮತ್ತು ಅಂತ್ಯಕ್ರಿಯೆಗೂ ಪರದಾಡಿದ ಕುಟುಂಬಗಳ ದುರಂತಗಳ ನಡುವೆಯೂ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವವರನ್ನು ದೇಶವಿರೋಧಿಗಳಂತೆ ಬಿಂಬಿಸುವ ಪ್ರಯತ್ನ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯನ್ನು ಟೀಕಿಸುವುದನ್ನೇ ಭಾರತವನ್ನು ಟೀಕಿಸಿದಂತೆ ಚಿತ್ರಿಸುವ ರಾಜಕೀಯ ಮನಸ್ಥಿತಿ ಬೆಳೆಸಲಾಗಿದೆ ಎಂದು ಆಕ್ಷೇಪಿಸಿದರು.

2021ರಲ್ಲಿ ಮುಸ್ಲಿಂ ಮಹಿಳೆಯರ ಛಾಯಾಚಿತ್ರಗಳನ್ನು ಹರಾಜು ಮಾಡುವ ರೀತಿಯಲ್ಲಿ ತೋರಿಸಿದ್ದ ‘ಸುಲ್ಲಿ ಡೀಲ್ಸ್’ ಪ್ರಕರಣವನ್ನು ಉಲ್ಲೇಖಿಸಿದ ಅವರು, ಡಿಜಿಟಲ್ ವೇದಿಕೆಗಳಲ್ಲಿ ಮಹಿಳೆಯರನ್ನು ಧಾರ್ಮಿಕ ಗುರುತಿನ ಆಧಾರದಲ್ಲಿ ಅವಮಾನಿಸುವ ಮತ್ತು ಗುರಿಯಾಗಿಸುವ ಅಪಾಯಕಾರಿ ಪ್ರವೃತ್ತಿ ಕಂಡುಬಂದಿದೆ ಎಂದರು. ಇಂತಹ ಘಟನೆಗಳಿಗೆ ಸೂಕ್ತ ಪರಿಣಾಮಗಳು ಎದುರಾಗದಿರುವುದು ಡಿಜಿಟಲ್ ದ್ವೇಷದ ರಾಜಕಾರಣಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದೆ ಎಂದು ಹೇಳಿದರು.

ಇಂದಿನ ಇಂಟರ್‌ನೆಟ್ ಪರಿಸ್ಥಿತಿಯಲ್ಲಿರುವ ವೈರುಧ್ಯಗಳನ್ನು ವಿವರಿಸಿದ ಅವರು, ಒಂದೆಡೆ ಜ್ಯೋತಿಷ್ಯ ಆ್ಯಪ್‌ಗಳ ಬಳಕೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷಪೂರಿತ ಹಾಡುಗಳು ಮತ್ತು ಹಿಂಸೆಗೆ ಪ್ರಚೋದಿಸುವ ವಿಷಯಗಳು ಹರಡುತ್ತಿವೆ ಎಂದು ಪ್ರಸ್ತಾಪಿಸಿದರು. ಸಂಗೀತ, ಮನರಂಜನೆ, ರೀಲ್‌ಗಳು ಮತ್ತು ದೃಶ್ಯ ಸಂಸ್ಕೃತಿ ಈಗ ರಾಜಕೀಯ ಅಭಿಪ್ರಾಯ ರೂಪಿಸುವ ಪ್ರಮುಖ ಸಾಧನಗಳಾಗಿವೆ. ರಾಜಕೀಯ ಪ್ರಚಾರವು ಕೇವಲ ಭಾಷಣ ಮತ್ತು ಬರಹಗಳಿಗೆ ಸೀಮಿತವಾಗದೆ ಮನರಂಜನೆಯ ರೂಪದಲ್ಲಿಯೂ ಜನರನ್ನು ತಲುಪುತ್ತಿದೆ ಎಂದರು.

ಡಿಜಿಟಲ್ ವೇದಿಕೆಗಳಲ್ಲಿ ನಡೆಯುತ್ತಿರುವ ಸೆನ್ಸಾರ್‌ಶಿಪ್ ಮತ್ತು ನಿರ್ಬಂಧಗಳ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದರು. ಸರ್ಕಾರದ ಬ್ಲಾಕಿಂಗ್ ಆದೇಶಗಳು, ಮೆಟಾ ಮತ್ತು ಯೂಟ್ಯೂಬ್‌ನಿಂದ ವಿಷಯಗಳನ್ನು ತೆಗೆದುಹಾಕುವ ಕ್ರಮಗಳು ಡಿಜಿಟಲ್ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಹೇಳಿದರು.

ಆದರೆ ಡಿಜಿಟಲ್ ಪ್ರಚಾರದ ಎದುರು ಪರ್ಯಾಯ ಧ್ವನಿಗಳು ಸಂಪೂರ್ಣವಾಗಿ ಸೋತಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಆಲ್ಟ್ ನ್ಯೂಸ್‌ನ ಮೊಹಮ್ಮದ್ ಜುಬೈರ್ ಮತ್ತು ಪ್ರತೀಕ್ ಸಿನ್ಹಾ ಅವರಂತಹವರು ಸುಳ್ಳುಮಾಹಿತಿ ಹಾಗೂ ಪ್ರಚಾರದ ವಿರುದ್ಧ ನಡೆಸಿದ ಹೋರಾಟವನ್ನು ಸ್ಮರಿಸಿದರು. ಸತ್ಯಾಂಶಗಳನ್ನು ಪರಿಶೀಲಿಸುವ ಮತ್ತು ಪ್ರಚಾರದ ಹಿಂದಿನ ವಾಸ್ತವವನ್ನು ಜನರ ಮುಂದಿಡುವ ಪ್ರಯತ್ನಗಳು ಮಹತ್ವದ್ದಾಗಿವೆ ಎಂದರು.

ಡಿಜಿಟಲ್ ರಾಜಕಾರಣದ ಸಂಘಟಿತ ಪ್ರಚಾರವನ್ನು ಎದುರಿಸಲು ಬ್ರೆಜಿಲ್‌ನ ರಾಜಕೀಯ ಬೆಳವಣಿಗೆಗಳನ್ನು ಉದಾಹರಣೆಯಾಗಿ ನೀಡಿದ ಅವರು, ಪರ್ಯಾಯ ಡಿಜಿಟಲ್ ಅಭಿಯಾನಗಳಿಗೆ ಕೆಲವು ಕಾರ್ಯತಂತ್ರಗಳನ್ನು ಮುಂದಿಟ್ಟರು. ತಮ್ಮ ಪರವಾದ ವಿಚಾರಗಳು ಮತ್ತು ವಿಷಯಗಳಿಗೆ ಹೆಚ್ಚಿನ ಪ್ರಚಾರ ನೀಡುವುದು, ದ್ವೇಷಪೂರಿತ ಪೋಸ್ಟ್‌ಗಳೊಂದಿಗೆ ಅನಗತ್ಯವಾಗಿ ಸಂವಹನ ನಡೆಸದಿರುವುದು, ಸಾಮಾಜಿಕ ಜಾಲತಾಣಗಳಲ್ಲಿನ ಸಂಘಟಿತ ಜಾಲಗಳನ್ನು ಗಮನಿಸುವುದು ಹಾಗೂ ವೈಯಕ್ತಿಕ ಮುಖಗಳ ಮೂಲಕ ಜನರೊಂದಿಗೆ ನೇರ ಸಂಪರ್ಕ ಬೆಳೆಸುವುದು ಮುಖ್ಯ ಎಂದರು.

ಅಲ್ಲದೆ, ಸಾಮಾಜಿಕ ಮಾಧ್ಯಮಗಳ ಸೀಮಿತ ವಿಚಾರವಲಯಗಳನ್ನು ಮೀರಿ ವಿಭಿನ್ನ ಸಮುದಾಯಗಳನ್ನು ತಲುಪುವ ವಿಷಯಗಳನ್ನು ರೂಪಿಸಬೇಕು. ರಾಷ್ಟ್ರೀಯ ಸಂಕೇತಗಳು ಮತ್ತು ಐತಿಹಾಸಿಕ ವ್ಯಕ್ತಿಗಳನ್ನು ನಿರ್ದಿಷ್ಟ ರಾಜಕೀಯ ಸಂಘಟನೆಗಳ ಸ್ವತ್ತಾಗಲು ಬಿಡದೆ, ಅವುಗಳ ನೈಜ ಚಿಂತನೆ ಮತ್ತು ಹೋರಾಟದ ಪರಂಪರೆಯನ್ನು ಜನರಿಗೆ ಪರಿಚಯಿಸಬೇಕು ಎಂದು ಹೇಳಿದರು.

ಸಾಮಾಜಿಕ ಮಾಧ್ಯಮದ ಮೂಲಕ ಮಾತ್ರವೇ ರಾಜಕೀಯ ಬದಲಾವಣೆ ಸಾಧ್ಯವಿಲ್ಲ. ಡಿಜಿಟಲ್ ವೇದಿಕೆಗಳ ಆಚೆಗೂ ಜನರ ನಡುವೆ ಸಂಘಟನೆ ಕಟ್ಟುವುದು, ಬೀದಿಗಿಳಿದು ಹೋರಾಟ ನಡೆಸುವುದು ಅತ್ಯಂತ ಮುಖ್ಯ. ಸುರತ್ಕಲ್ ಟೋಲ್ ವಿರೋಧಿ ಹೋರಾಟದಂತಹ ಜನಾಂದೋಲನಗಳು ಇದಕ್ಕೆ ಉದಾಹರಣೆಯಾಗಿವೆ. ಪ್ರಚಾರಕ್ಕೆ ಸಂಘಟಿತ ಯಂತ್ರ ಬೇಕಾಗಬಹುದು; ಆದರೆ ಸತ್ಯಕ್ಕೂ ತನ್ನದೇ ಆದ ಆಕರ್ಷಣೆ ಮತ್ತು ಶಕ್ತಿ ಇದೆ. ಅದರ ಗೆಲುವು ತಾನಾಗಿಯೇ ಸಿಗುವುದಿಲ್ಲ. ಅದಕ್ಕಾಗಿ ಪ್ರತಿದಿನ ನಿರಂತರ ಪ್ರಯತ್ನ ಮತ್ತು ಸಂಘಟಿತ ಜನಪರ ಹೋರಾಟ ಅಗತ್ಯ ಎಂದು ಜಿ. ವಿಷ್ಣು ಪ್ರತಿಪಾದಿಸಿದರು.

PPeepal Media Desk

Peepal Media Desk

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು