ಕೋಮುವಾದ ಮತ್ತು ಏಕಸ್ವಾಮ್ಯ ಬಂಡವಾಳಶಾಹಿ ನಡುವಿನ ಅಪವಿತ್ರ ಮೈತ್ರಿಯೇ ಫ್ಯಾಸಿಸಂ ಬೆಳವಣಿಗೆಗೆ ಕಾರಣ: ಟಿ.ಎಲ್. ಕೃಷ್ಣೇಗೌಡ
ಲಿಂಕ್ ನಕಲಿಸಲಾಗಿದೆ ✓
ಮಂಗಳೂರು : ದೇಶದಲ್ಲಿ ಕೋಮುವಾದಿ ಶಕ್ತಿಗಳ ಬೆಳವಣಿಗೆ ಮತ್ತು ಏಕಸ್ವಾಮ್ಯ ಬಂಡವಾಳಶಾಹಿಗಳ ಪ್ರಭಾವದ ಹಿಂದೆ ರಾಜಕೀಯ ಅಧಿಕಾರ ಹಾಗೂ ಕಾರ್ಪೊರೇಟ್ ವಲಯದ ನಡುವಿನ ಅಪವಿತ್ರ ಮೈತ್ರಿ ಕಾರ್ಯನಿರ್ವಹಿಸುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟಿನಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕೋಮುವಾದವನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಚಿಂತಕ ಟಿ.ಎಲ್. ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ನಗರದ ಕೆಟಿಸಿ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ‘ಜನನುಡಿ–2026’ ಯುವಜನ ರಾಜಕಾರಣ: ದಿಕ್ಕು–ಭವಿಷ್ಯ–ಸವಾಲುಗಳು ಕಾರ್ಯಕ್ರಮದಲ್ಲಿ ನಡೆದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದ ಮತ್ತು ಕ್ರೋನಿ ಕ್ಯಾಪಿಟಲಿಸಂ ನಡುವಿನ ಸಂಬಂಧವನ್ನು ಐತಿಹಾಸಿಕ ಹಾಗೂ ಆರ್ಥಿಕ ನೆಲೆಯಲ್ಲಿ ವಿಶ್ಲೇಷಿಸಿದರು.
1991ರ ಆರ್ಥಿಕ ಉದಾರೀಕರಣದ ಕಾಲಘಟ್ಟವು ಭಾರತದಲ್ಲಿ ಕೋಮುವಾದಿ ಶಕ್ತಿಗಳು ಪ್ರಬಲವಾಗಿ ಬೆಳೆಯಲು ಪೂರಕ ವಾತಾವರಣ ನಿರ್ಮಿಸಿತು. ಒಂದೆಡೆ ನಿರುದ್ಯೋಗ, ಕೊಳ್ಳುವ ಶಕ್ತಿಯ ಕುಸಿತ ಹಾಗೂ ಜನಸಾಮಾನ್ಯರ ಆರ್ಥಿಕ ಸಂಕಷ್ಟ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಏಕಸ್ವಾಮ್ಯ ಬಂಡವಾಳಿಗರ ಕೈಯಲ್ಲಿ ಸಂಪತ್ತು ಕೇಂದ್ರೀಕೃತವಾಗುತ್ತಿತ್ತು. ಈ ಅಸಮಾನತೆಯಿಂದ ಜನರಲ್ಲಿ ಮೂಡಿದ ಅಸಮಾಧಾನವನ್ನು ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ಹೋರಾಟದತ್ತ ಕೊಂಡೊಯ್ಯುವ ಬದಲು ಧಾರ್ಮಿಕ ದ್ವೇಷದತ್ತ ತಿರುಗಿಸುವ ಪ್ರಯತ್ನಗಳು ನಡೆದವು ಎಂದು ವಿಶ್ಲೇಷಿಸಿದರು.
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಧಿಕಾರಸ್ಥ ರಾಜಕೀಯ ನಾಯಕರು ಮತ್ತು ಉದ್ಯಮಿಗಳ ನಡುವಿನ ನಿಕಟ ಸಂಬಂಧವೇ ಕ್ರೋನಿ ಕ್ಯಾಪಿಟಲಿಸಂನ ಮೂಲ ಸ್ವರೂಪವಾಗಿದೆ. ಅರ್ಹತೆ ಮತ್ತು ಮುಕ್ತ ಸ್ಪರ್ಧೆಯ ಆಧಾರದ ಮೇಲೆ ಅವಕಾಶಗಳು ಹಂಚಿಕೆಯಾಗಬೇಕಾದ ವ್ಯವಸ್ಥೆಯಲ್ಲಿ, ರಾಜಕೀಯ ಅಧಿಕಾರಕ್ಕೆ ಹತ್ತಿರವಿರುವ ಉದ್ಯಮಿಗಳಿಗೆ ವಿಶೇಷ ಅನುಕೂಲ ಕಲ್ಪಿಸಲಾಗುತ್ತಿದೆ. ಇಂತಹ ವ್ಯವಸ್ಥೆಯನ್ನು ಕೇವಲ ಕ್ರೋನಿ ಬಂಡವಾಳಶಾಹಿ ಎಂದು ಪ್ರತ್ಯೇಕಿಸಿ ನೋಡುವುದಕ್ಕಿಂತ, ಬಂಡವಾಳಶಾಹಿಯ ಮೂಲ ಸ್ವರೂಪದ ಭಾಗವಾಗಿಯೇ ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
1930ರ ಜರ್ಮನಿಯಲ್ಲಿ ಹಿಟ್ಲರನ ಉದಯಕ್ಕೆ ಅಲ್ಲಿನ ಬೃಹತ್ ಉದ್ಯಮಿಗಳು ಬೆಂಬಲ ನೀಡಿದ ಐತಿಹಾಸಿಕ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ಇಂದಿನ ಭಾರತದಲ್ಲಿಯೂ ರಾಜಕೀಯ ಅಧಿಕಾರ ಮತ್ತು ಕಾರ್ಪೊರೇಟ್ ಬಂಡವಾಳದ ನಡುವಿನ ಸಂಬಂಧವನ್ನು ಗಮನಿಸಬೇಕಿದೆ ಎಂದರು. ಗುಜರಾತ್ ಮಾದರಿಯ ಪ್ರಚಾರ, ರಫೇಲ್ ಯುದ್ಧವಿಮಾನ ಒಪ್ಪಂದದಲ್ಲಿ ಅನಿಲ್ ಅಂಬಾನಿ ಕಂಪನಿಗೆ ದೊರೆತ ಅವಕಾಶ ಹಾಗೂ ಅದಾನಿ ಸಮೂಹದ ವಿರುದ್ಧದ ಆರೋಪಗಳ ಕುರಿತು ಸರ್ಕಾರದ ನಿಲುವುಗಳನ್ನು ಈ ಸಂಬಂಧದ ಉದಾಹರಣೆಗಳಾಗಿ ಪ್ರಸ್ತಾಪಿಸಿದರು.
ಒಂದು ಕಡೆ ಕೆಲವೇ ಉದ್ಯಮಿಗಳ ಸಂಪತ್ತು ಅಗಾಧವಾಗಿ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಜನಸಾಮಾನ್ಯರು ಬಡತನ, ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು ಮತ್ತು ವೇತನ ಕುಸಿತದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಆರ್ಥಿಕ ಅಸಮಾನತೆಯೇ ಸಮಾಜದಲ್ಲಿ ಅಸಮಾಧಾನ ಮತ್ತು ಹೋರಾಟಗಳಿಗೆ ಕಾರಣವಾಗುತ್ತಿದೆ. ಇಂತಹ ಹೋರಾಟಗಳು ವ್ಯವಸ್ಥೆಯ ಮೂಲಭೂತ ಪ್ರಶ್ನೆಗಳನ್ನು ಎತ್ತದಂತೆ ತಡೆಯಲು ಕೋಮುವಾದ ಮತ್ತು ಫ್ಯಾಸಿಸ್ಟ್ ರಾಜಕಾರಣವನ್ನು ಬಳಸಲಾಗುತ್ತಿದೆ ಎಂದು ಟೀಕಿಸಿದರು.
ಧಾರ್ಮಿಕ, ಭಾಷಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರನ್ನು ಸಮಾಜದ ಶತ್ರುಗಳೆಂದು ಬಿಂಬಿಸುವ ಮೂಲಕ ಕೃತಕ ಶತ್ರುಗಳನ್ನು ಸೃಷ್ಟಿಸಲಾಗುತ್ತಿದೆ. ಜನರ ನೈಜ ಸಮಸ್ಯೆಗಳಿಗೆ ಕಾರಣವಾಗಿರುವ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯ ಬದಲಾಗಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಹರಡುವುದು ಈ ರಾಜಕಾರಣದ ಪ್ರಮುಖ ತಂತ್ರವಾಗಿದೆ. ಅಧಿಕಾರಕ್ಕೆ ಬಂದ ಬಳಿಕ ಪ್ರಗತಿಪರ ಚಿಂತಕರು, ಅಲ್ಪಸಂಖ್ಯಾತರು ಹಾಗೂ ರಾಜಕೀಯ ವಿರೋಧಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಮಳವಳ್ಳಿ ಭಾಗದ ಜನರು ತಮ್ಮ ಜೀವನದ ಸಂಕಷ್ಟಗಳಿಗೆ ಪರಿಹಾರ ದೊರೆಯಲಿ ಎಂಬ ಆಶಯದಿಂದ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುವ ಉದಾಹರಣೆ ನೀಡಿದ ಅವರು, ಇದೇ ಜನರು ತಮ್ಮ ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಧಾನಸೌಧ ಮತ್ತು ಸಂಸತ್ತಿನತ್ತ ಹಕ್ಕುಗಳಿಗಾಗಿ ಪಾದಯಾತ್ರೆ ನಡೆಸುವ ರಾಜಕೀಯ ಅರಿವು ಬೆಳೆಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಜನರ ನೈಜ ಆರ್ಥಿಕ ಸಂಕಷ್ಟಗಳ ಅರಿವನ್ನು ರಾಜಕೀಯ ಹಕ್ಕುಗಳ ಹೋರಾಟದೊಂದಿಗೆ ಬೆಸೆಯಬೇಕಿದೆ ಎಂದರು.
ಕೋಮುವಾದವು ಜನರಲ್ಲಿ ಕೃತಕ ಸಾಮಾನ್ಯ ಪ್ರಜ್ಞೆಯನ್ನು ನಿರ್ಮಿಸಿದ್ದು, ಧಾರ್ಮಿಕ ಶ್ರೇಷ್ಠತೆ ಮತ್ತು ಪ್ರಾಬಲ್ಯದ ಭಾವನೆಗಳನ್ನು ಬಿತ್ತುತ್ತಿದೆ. ಆದರೆ ಜನಸಾಮಾನ್ಯರ ನಿಜವಾದ ಸಾಮಾನ್ಯ ಅನುಭವವೆಂದರೆ ಬಡತನ, ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ ಮತ್ತು ಜೀವನೋಪಾಯದ ಅಭದ್ರತೆ. ಈ ನೈಜ ಅನುಭವಗಳ ಆಧಾರದಲ್ಲಿ ಕೋಮುವಾದಿ ಪ್ರಚಾರವನ್ನು ಪ್ರಶ್ನಿಸುವ ಕೆಲಸ ನಡೆಯಬೇಕು ಎಂದು ತಿಳಿಸಿದರು.
ಫ್ಯಾಸಿಸಂ ವಿರುದ್ಧದ ಹೋರಾಟವನ್ನು ಕೇವಲ ಸಾಂಸ್ಕೃತಿಕ ಅಥವಾ ರಾಜಕೀಯ ನೆಲೆಯಲ್ಲಿ ಸೀಮಿತಗೊಳಿಸಲಾಗದು. ನವ ಉದಾರವಾದಿ ಆರ್ಥಿಕ ನೀತಿಗಳು ಮತ್ತು ಏಕಸ್ವಾಮ್ಯ ಬಂಡವಾಳಶಾಹಿಯ ವಿರುದ್ಧವೂ ಸೈದ್ಧಾಂತಿಕ ಹೋರಾಟ ರೂಪಿಸಬೇಕಿದೆ. ಸರ್ಕಾರ ಬದಲಾವಣೆ ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹೋರಾಟದ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯವಾದರೂ, ಅಂತಿಮವಾಗಿ ಆರ್ಥಿಕ ಶೋಷಣೆ ಮತ್ತು ಅಸಮಾನತೆಯನ್ನು ಪೋಷಿಸುವ ವ್ಯವಸ್ಥೆಯನ್ನೇ ಪ್ರಶ್ನಿಸಬೇಕಿದೆ ಎಂದು ಪ್ರತಿಪಾದಿಸಿದರು.
‘ಜನನುಡಿ’ಯಂತಹ ವೇದಿಕೆಗಳು ಜನಸಾಮಾನ್ಯರ ನೈಜ ಬದುಕಿನ ಅನುಭವಗಳನ್ನು ರಾಜಕೀಯ ಚರ್ಚೆಯೊಂದಿಗೆ ಬೆಸೆಯುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಮಹತ್ವದ ಕೆಲಸ ಮಾಡುತ್ತಿವೆ. ಕೋಮುವಾದ ಮತ್ತು ಏಕಸ್ವಾಮ್ಯ ಬಂಡವಾಳಶಾಹಿಯ ನಡುವಿನ ಸಂಬಂಧವನ್ನು ಅರ್ಥಮಾಡಿಕೊಂಡು ಜನರನ್ನು ಸಂಘಟಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಟಿ.ಎಲ್. ಕೃಷ್ಣೇಗೌಡ ಹೇಳಿದರು.
Peepal Media Desk
Peepal Media · ರಾಜಕೀಯ ವಿಭಾಗ